ಐಐಟಿ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ
ಐದು ದಿನಗಳಲ್ಲಿ ನಡೆದ ಮೂರನೇ ಪ್ರಕರಣ

ಜೈಪುರ, ಡಿ.26: ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಹಲವು ಕೋಚಿಂಗ್ ಸೆಂಟರ್‌ಗಳಿರುವ ರಾಜಸ್ತಾನದ ಕೋಟದಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ವಾಸವಿದ್ದ ಹಾಸ್ಟೆಲ್‌ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕೋಟ ನಗರದಲ್ಲಿ ಕಳೆದ ಐದು ದಿನದಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಐಐಟಿಗೆ ಪ್ರವೇಶ ಪಡೆಯಲು ಬಯಸಿದ್ದ ಈ ವಿದ್ಯಾರ್ಥಿ ಮಂಗಳವಾರ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯ ಪೋಷಕರು ಬಿಹಾರದಲ್ಲಿದ್ದಾರೆ. ತಮ್ಮ ಮಗ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂದು ಪೋಷಕರು , ಅದೇ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ಸೋದರ ಸಂಬಂಧಿಗೆ ತಿಳಿಸಿದ್ದಾರೆ. ಆತ ತಕ್ಷಣ ಹಾಸ್ಟೆಲ್‌ಗೆ ಧಾವಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ .ಕೋಣೆಯಲ್ಲಿ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ ಪೊಲೀಸ್ ಮೂಲಗಳು ತಿಳಿಸಿವೆ.
ಡಿ.24ರಂದು ಮೆಡಿಕಲ್ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಉತ್ತರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿಂದೆ ಕಾಟನ್ ಸೀರೆಗಳಿಗೆ ಹೆಸರಾಗಿದ್ದ ಕೋಟ ನಗರ ಜೈಪುರದಿಂದ 250 ಕಿ.ಮೀ. ದೂರದಲ್ಲಿದ್ದು ಇದೀಗ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೇಂದ್ರವೆನಿಸಿದೆ. ನಗರದಲ್ಲಿ 150ಕ್ಕೂ ಅಧಿಕ ಕೋಚಿಂಗ್ ಸೆಂಟರ್‌ಗಳಿದ್ದು ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ತರಬೇತಿಗೆ ದಾಖಲಾತಿ ಮಾಡಿಕೊಂಡಿದ್ದಾರೆ.
ಇಲ್ಲಿ ತರಬೇತಿಯ ಸಂದರ್ಭದಲ್ಲಿ ಎದುರಾಗುವ ಒತ್ತಡವನ್ನು ತಾಳಲಾರದೆ ವಿದ್ಯಾರ್ಥಿಗಳು ಹತಾಶರಾಗುತ್ತಿದ್ದಾರೆ. 2011ರಿಂದ ಕೋಟದಲ್ಲಿ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







