ಪೊಲೀಸರಿಗೆ ಹೊಸ ವರ್ಷಕ್ಕೆ ಉಡುಗೊರೆ: ಮುಖ್ಯಮಂತ್ರಿ ಕುಮಾರಸ್ವಾಮಿ
ನೂತನ ಗಸ್ತು ದ್ವಿಚಕ್ರ ವಾಹನಗಳು ಸೇವೆಗೆ ಸಮರ್ಪಣೆ

ಬೆಂಗಳೂರು, ಡಿ.26: ಪೊಲೀಸರ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಹೊಸವರ್ಷದ ಉಡುಗೊರೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸೌಧದ ಪೂರ್ವದ್ವಾರದಲ್ಲಿ ಪೊಲೀಸರಿಗೆ ನೂತನ ಗಸ್ತು ದ್ವಿಚಕ್ರ ವಾಹನಗಳನ್ನು ಸೇವೆಗೆ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸಿದೆ. ಹೀಗಾಗಿ, ಮುಂದಿನ ವರ್ಷದ ಆರಂಭದಲ್ಲಿ ಬೇಡಿಕೆಗಳನ್ನು ಈಡೇರಿಸುವ ಮೂಲಕ ಉಡುಗರೆ ನೀಡಲು ತೀರ್ಮಾನಿಸಿದ್ದೇವೆ ಎಂದರು.
ಪೊಲೀಸರು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಲು ಅಗತ್ಯವಿರುವ ಸೌಲಭ್ಯ ಮತ್ತು ಸೌಕರ್ಯವನ್ನು ಪೂರೈಸಲು ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ. ಕೆಳ ಹಂತದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಲು ಅವರಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಕೆಲವು ಸೌಲಭ್ಯ ಕಲ್ಪಿಸಬೇಕಿದೆ. ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ವರದಿ ಸಲ್ಲಿಕೆಯಾಗಿದೆ. ಎಲ್ಲವನ್ನೂ ಪರಿಗಣಿಸಿ ಸಿಬ್ಬಂದಿಗೆ ಹೊಸ ವರ್ಷದ ಉಡುಗೊರೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹೊಸ ನೇಮಕಾತಿ: ಬೆಂಗಳೂರು ನಗರ ದಿನದಿಂದ ದಿನಕ್ಕೆ ನಿರೀಕ್ಷೆ ಮತ್ತು ಕಲ್ಪನೆಗೂ ಮೀರಿ ಬೆಳೆಯುತ್ತಿದೆ. ಅದರಂತೆ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಪ್ರಮಾಣ ಹೆಚ್ಚಿಸಬೇಕಾಗಿದೆ. ಹಾಗಾಗಿ ಹೊಸ ಪೊಲೀಸರ ನೇಮಕಾತಿಗೆ ಸಹ ಮುಂದಾಗುವ ಪ್ರಕ್ರಿಯೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಎದುರಾಗಿರುವ ಪೊಲೀಸ್ ಸಿಬ್ಬಂದಿ ಕೊರತೆ ಸರಿದೂಗಿಸಲು ಮುಂಬರುವ ವರ್ಷಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಪೊಲೀಸರ ನೇಮಕಾತಿ ಆಗಲಿದೆ. ಪೊಲೀಸರಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ನಾಗರಿಕರ ರಕ್ಷಣೆ ಹಾಗೂ ಕಾನೂನ ಸುವ್ಯವಸ್ಥೆಗೆ ಎಲ್ಲ ಸೌಲಭ್ಯ ಸರ್ಕಾರ ಒದಗಿಸಲಿದೆ ಎಂದರು.
ಸರಗಳ್ಳತನಕ್ಕೆ ಕಡಿವಾಣ: ವಿತರಿಸಿರುವ ದ್ವಿಚಕ್ರ ವಾಹನಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನಗಳಿಗೆ ಕಡಿವಾಣ ಹಾಕಿ. ಮಹಿಳೆಯರಲ್ಲಿ ತಾವು ಸುರಕ್ಷಿತ ಎಂಬ ಭಾವನೆ ಮೂಡಿಸಿ ಎಂದು ಮುಖ್ಯಮಂತ್ರಿ ಇದೇ ವೇಳೆ ಸೂಚಿಸಿದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಬೆಂಗಳೂರು ಪೊಲೀಸ್ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಇಲಾಖೆಗೆ ಇನ್ನಷ್ಟು ಬಲ ತುಂಬಲು 911 ದ್ವಿಚಕ್ರ ವಾಹನಗಳನ್ನು ಗಸ್ತು ತಿರುಗಲು ನೀಡಲಾಗಿದೆ. ಈಗಾಗಲೇ 300 ಹೊಯ್ಸಳ ಕಾರುಗಳು ಗಸ್ತು ತಿರುಗುತ್ತಿವೆ. ಆದರೆ ಕೆಲ ಬೀದಿಗಳಿಗೆ ಕಾರುಗಳು ಹೋಗಲು ಸಾಧ್ಯವಿಲ್ಲ. ಹೀಗಾಗಿ ನಗರದೆಲ್ಲೆಡೆ ಗಸ್ತು ತಿರುಗಲು ಬೈಕ್ ನೀಡಲಾಗಿದ್ದು, ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ಶಾಸಕ ರೋಷನ್ ಬೇಗ್, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಮದ್ದೂರಿನ ಜೆಡಿಎಸ್ ಮುಖಂಡ ಪ್ರಕಾಶ್ ಹಂತಕರನ್ನು ಸ್ಮೋಕ್‌ಔಟ್ ಮಾಡಿ ಎಂದು ಹೇಳುವ ಬದಲು ಭಾವಾವೇಶದಲ್ಲಿ ಶೂಟ್‌ಔಟ್ ಎಂಬ ಪದ ಬಳಸಿದ್ದೇನೆ. ಆದರೆ ಇದನ್ನೇ ದೊಡ್ಡದು ಮಾಡುವುದು ಸರಿಯಲ್ಲ. ನಾನು ಭಾವುಕ ಮನುಷ್ಯ ಹಾಗಾಗಿ ಆ ಸಂದರ್ಭದಲ್ಲಿ ಆ ರೀತಿ ಮಾತನಾಡಿದ್ದೆ. ಪದ ಬಳಕೆಯಲ್ಲಿ ತಪ್ಪಾಗಿದೆ. ಬೇಕು ಬೇಕೆಂದು ಈ ರೀತಿ ನಾನು ಹೇಳಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ







