ರಾಜ್ಯದಲ್ಲಿ ಶೇ.100ರಷ್ಟು ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಗುರಿ: ಡಿ.ಎಲ್.ಪ್ರಮೋದ್
ಬೆಂಗಳೂರು, ಡಿ.26: ರಾಜ್ಯದಲ್ಲಿ ಸುಮಾರು 1.48 ಕೋಟಿ ಕುಟುಂಬಗಳಿದ್ದು, ಈಗಾಗಲೇ ಶೇ.96.75ರಷ್ಟು ಕುಟುಂಬಗಳು ಎಲ್‌ಪಿಜಿ ಅಡುಗೆ ಅನಿಲದ ಸಂಪರ್ಕವನ್ನು ಹೊಂದಿವೆ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಸಂಪರ್ಕ ಕಲ್ಪಿಸುವ ಗುರಿ ನಮ್ಮದಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಕಾರ್ಯಕಾರಿ ನಿರ್ದೇಶಕ ಡಿ.ಎಲ್.ಪ್ರಮೋದ್ ತಿಳಿಸಿದರು.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ‘ಪ್ರಧಾನಮಂತ್ರಿ ಉಜ್ವಲ ಯೋಜನೆ-2’ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2014ರ ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಶೇ.68.50ರಷ್ಟು ಕುಟುಂಬಗಳು ಎಲ್‌ಪಿಜಿ ಸಂಪರ್ಕ ಪಡೆದಿದ್ದವು. ಈಗ ಆ ಪ್ರಮಾಣವು ಶೇ.96.75ಕ್ಕೆ ಹೆಚ್ಚಳವಾಗಿದೆ ಎಂದರು.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 18 ಲಕ್ಷ ಹೊಸ ಸಂಪರ್ಕವನ್ನು ನೀಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಕುಟುಂಬ ಮಹಿಳಾ ಸದಸ್ಯೆಯ ಹೆಸರಿನಲ್ಲಿ ಎಲ್‌ಪಿಜಿ ಸಂಪರ್ಕ ನೀಡಲಾಗುತ್ತಿದೆ. ಎಲ್‌ಪಿಜಿ ಸಂಪರ್ಕ ಪಡೆಯಲು ಇಚ್ಛಿಸುವವರು ಗುರುತು ಹಾಗೂ ವಿಳಾಸದ ದಾಖಲೆ, ಪಡಿತರ ಚೀಟಿ, ಆಧಾರ್ ಕಾರ್ಡ್ ಪ್ರತಿಗಳನ್ನು ಸಲ್ಲಿಸಬೇಕು. ಅಲ್ಲದೇ, 14 ಅಂಶಗಳನ್ನು ಒಳಗೊಂಡ ದೃಢೀಕರಣ ನೀಡಬೇಕು ಎಂದು ಅವರು ಹೇಳಿದರು.
2019ನೆ ಸಾಲಿನ ಜನವರಿ, ಫೆಬ್ರವರಿ ವೇಳೆಗೆ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 1 ಕೋಟಿ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ಸಿಲಿಂಡರ್ ಸರಬರಾಜು ಜಾಲವನ್ನು ವಿಸ್ತರಣೆ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರವೇ 238 ಹೊಸ ಡೀಲರ್‌ಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಮೋದ್ ತಿಳಿಸಿದರು.
14.2 ಕೆಜಿ ತೂಕದ ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ನಾವು ನೀಡುತ್ತಿದ್ದೇವೆ. ಈಗ ಹೊಸದಾಗಿ 5 ಕೆಜಿ ತೂಕದ ಸಿಲಿಂಡರ್‌ಗಳನ್ನು ಗೃಹ ಬಳಕೆಯ ಉದ್ದೇಶಕ್ಕಾಗಿ ಪರಿಚಯಿಸಲಾಗಿದೆ. 14.2 ಕೆಜಿಯ ಸಿಲಿಂಡರ್ ಬದಲು 5 ಕೆಜಿಯ ಸಿಲಿಂಡರ್‌ಗಳ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರಧಾನಮಂತ್ರಿ ಎಲ್‌ಪಿಜಿ ಪಂಚಾಯತ್‌ಗಳನ್ನು ನಡೆಸಲಾಗುತ್ತಿದೆ. ಅಡುಗೆ ಅನಿಲ ಸಿಲಿಂಡರ್‌ಗಳ ಬಳಕೆ, ಅನಿಲದ ಉಳಿತಾಯ, ಮನೆಯಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳ ಕುರಿತು ಗ್ರಾಹಕರಿಗೆ ಹಾಗೂ ಜನಸಾಮಾನ್ಯರಿಗೆ ಈ ಪಂಚಾಯತ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ . ಈ ವರ್ಷದಲ್ಲಿ 1200 ಎಲ್‌ಪಿಜಿ ಪಂಚಾಯತ್‌ಗಳನ್ನು ನಡೆಸಲಾಗಿದೆ ಎಂದು ಪ್ರಮೋದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಲ್‌ಪಿಜಿ-ಎಚ್‌ಸಿಎಲ್ ರಾಜ್ಯ ಮುಖ್ಯಸ್ಥ ಪ್ರದೀಪ್ ನಾಯರ್, ಎಲ್‌ಪಿಜಿ-ಎಚ್‌ಸಿಎಲ್ ಡಿಜಿಎಂ ಎ.ವಿನೋದ್ ಕುಮಾರ್, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಿಜಿಎಂ ಕೆ.ಶೈಲೇಂದ್ರ ಉಪಸ್ಥಿತರಿದ್ದರು.







