ಸೂಲಗಿತ್ತಿ ನರಸಮ್ಮ, ಏಳುಮಲೈಗೆ ಬಿಬಿಎಂಪಿ ಶ್ರದ್ಧಾಂಜಲಿ

ಬೆಂಗಳೂರು, ಡಿ.26: ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಹಾಗೂ ಬಿಬಿಎಂಪಿ ಪಾಲಿಕೆ ಸದಸ್ಯ ಬಿ.ಏಳುಮಲೈ ಅವರ ನಿಧನಕ್ಕಾಗಿ ಪಾಲಿಕೆ ಸಭೆಯಲ್ಲಿಂದು ಸದಸ್ಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿ ಏಳುಮಲೈ ಅವರು ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದವರು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆಡಳಿತ ಬರಲು ಅವರು ಕೂಡ ಕಾರಣರಾಗಿದ್ದರು. 2 ಬಾರಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಅನುದಾನದ ಸದ್ಭಳಕೆಯಲ್ಲಿ ಶ್ರಮಿಸಿದರು ಎಂದು ಗುಣಗಾನ ಮಾಡಿದರು.
ಪ್ರತಿ ಪಕ್ಷ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಏಳುಮಲೈ ನಿಧನದಿಂದ ಬಿಬಿಎಂಪಿ ವಿಶೇಷವಾಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆಡಳಿತಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸೂಲಗಿತ್ತಿ ನರಸಮ್ಮ ಅವರು ನುರಿತ ವೈದ್ಯರಿಗಿಂತ ಸಹಜವಾಗಿಯೇ ಹೆರಿಗೆ ಮಾಡಿಸುತ್ತಿದ್ದರು ಎಂದು ಹೇಳಿದರು. ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಮಾತನಾಡಿ ವೈದ್ಯರ ನಿರ್ಲಕ್ಷದಿಂದ ಏಳುಮಲೈ ಅವರು ಪ್ರಾಣ ಕಳೆದುಕೊಳ್ಳಬೇಕಾಯಿತು. ಸಂತೋಷ್ ಆಸ್ಪತ್ರೆ ವೈದ್ಯರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ಮೇಯರ್ ಗಂಗಾಂಬಿಕೆ ಅವರು ಗುರುವಾರಕ್ಕೆ ಸಭೆ ಮುಂದೂಡಿರುವುದಾಗಿ ಪ್ರಕಟಿಸಿದರು.
ಕೆಎಂಸಿಗೆ ಪತ್ರ
ಸಗಾಯಪುರಂ ವಾರ್ಡ್ ಸದಸ್ಯ ಬಿ.ಏಳುಮಲೈ ಅವರಿಗೆ ಚಿಕಿತ್ಸೆ ನೀಡಿದ ಸಂತೋಷ್ ಆಸ್ಪತ್ರೆ ವೈದ್ಯರ ವಿರುದ್ಧ ತನಿಖೆ ನಡೆಸುವಂತೆ ಕರ್ನಾಟಕ ವೈದ್ಯಕೀಯ ಮಂಡಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ತನಿಖೆ ಆರಂಭವಾಗಿದೆ. ಸದ್ಯದಲ್ಲೇ ವರದಿ ಬರಲಿದ್ದು, ವರದಿ ಆಧರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್







