ಡಿ.27ರಂದು ಉಡುಪಿಗೆ ರಾಷ್ಟ್ರಪತಿ ಭೇಟಿ: ಮಠದ ಭಕ್ತರಿಗೆ ನಿರ್ಬಂಧ

ಉಡುಪಿ, ಡಿ. 26: ಬಿಗುಭದ್ರತೆ, ಶ್ರೀಮಠದ ಭಕ್ತರಿಗೆ ನಿರ್ಬಂಧಗಳ ನಡುವೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಡಿ.27ರಂದು ಮೊದಲ ಬಾರಿ ಉಡುಪಿಗೆ ಭೇಟಿ ನೀಡಲಿದ್ದಾರೆ.
ಸನ್ಯಾಸ್ಯಾಶ್ರಮ ಸ್ವೀಕರಿಸಿ 80 ವರ್ಷಗಳನ್ನು ಪೂರೈಸಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದು, ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನಕ್ಕಾಗಿ ಅವರು ಇದೇ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡುತಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಳಗ್ಗೆ 11:35ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮಿಸುವ ರಾಷ್ಟ್ರಪತಿಗಳು, ಅಪರಾಹ್ನ 12:10ಕ್ಕೆ ಪೇಜಾವರ ಮಠಕ್ಕೆ ತೆರಳಿ ಪೇಜಾವರಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. 12:45ಕ್ಕೆ ಶ್ರೀಕೃಷ್ಣ ಮಠಕ್ಕೆ ತೆರಳಿ ಕೃಷ್ಣ-ಮುಖ್ಯಪ್ರಾಣರ ದರ್ಶನ ಪಡೆಯುವರು. 1:05ಕ್ಕೆ ಅವರು ಮಂಗಳೂರಿಗೆ ನಿರ್ಗಮಿಸುವ ಕಾರ್ಯಕ್ರಮವಿದೆ.
ರಾಷ್ಟ್ರಪತಿಗಳು ವಿಶ್ರಾಂತಿ ಪಡೆಯಲು ಐಬಿಗೆ ತೆರಳುವರೇ, ಮಠದಲ್ಲಿ ಕೃಷ್ಣ ಪ್ರಸಾದ ಸ್ವೀಕರಿಸುವರೇ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಅವರು ಭೋಜನವನ್ನು ಎಲ್ಲಿ ಸ್ವೀಕರಿಸುವರು ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ ಏನೇ ಇದ್ದರೂ ನಾವು ಸಿದ್ಧರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ರಥಬೀದಿ ಸುತ್ತಮುತ್ತ, ಕನಕದಾಸ ರಸ್ತೆ, ಬಡಗುಪೇಟೆ, ತೆಂಕಪೇಟೆ ಸೇರಿದಂತೆ ಆಸುಪಾಸಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಇಂದು ಅಪರಾಹ್ನದಿಂದಲೇ ಮುಚ್ಚಲಾಗಿದೆ. ರಥಬೀದಿಯಲ್ಲಿ ಜನಸಂಚಾರ ವಿರಳವಾಗಿತ್ತು.
ಪೊಲೀಸರಿಂದ ತಾಲೀಮು
ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರ ಉಡುಪಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ತಾಲೀಮು ನಡೆಸಿದರು. ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದುದ್ದಕ್ಕೂ, ಮಠದ ಪರಿಸರದಲ್ಲಿ ಒಟ್ಟು 900ಕ್ಕೂ ಅಧಿಕ ಸಿಬ್ಬಂದಿಗಳನ್ನು ಆಯಕಟ್ಟಿನ ಸ್ಥಳ ಭದ್ರತೆಗಾಗಿ ನಿಯೋಜಿಸಲಾಗಿದೆ.
ಅಪರಾಹ್ನ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಜೈಶಂಕರ್ ನೇತೃತ್ವದಲ್ಲಿ ಆಗಮನದ ತಾಲೀಮು(ರಿಹರ್ಸಲ್) ಸಹ ನಡೆಯಿತು. ಕರಾವಳಿ ಬೈಪಾಸ್ ಸಮೀಪದ ಹೆಲಿಪ್ಯಾಡ್‌ನಿಂದ ರಥಬೀದಿಗೆ ಬಂದ ತಾಲೀಮು ತಂಡ, ಪೇಜಾವರ ಮಠ ಹಾಗೂ ಶ್ರೀಕೃಷ್ಣಮಠಕ್ಕೆ ಪ್ರವೇಶಿಸುವ ರಥಬೀದಿ ಮಾರ್ಗ, ಸವುಯ, ವ್ಯವಸ್ಥೆಯನ್ನು ಪರಿಶೀಲಿಸಿತು.
ರಾಷ್ಟ್ರಪತಿ ಕಾರು
ಬೆಂಗಳೂರಿನಿಂದ ಬಂದ ಮರ್ಸಡೈಸ್ಡ್ ಬೆಂಝ್ (ಕೆಎ01 ಜಿಎ0011) ಕಪ್ಪು ಬಣ್ಣದ ಕಾರಿನಲ್ಲಿ ರಾಷ್ಟ್ರಪತಿಗಳು ಆಗಮಿಸಲಿದ್ದು, ಇದೇ ಕಾರನ್ನು ತಾಲೀಮಿನಲ್ಲಿ ಬಳಸಲಾಯಿತು. ಇದರಲ್ಲಿ ಒಟ್ಟು 23 ಕಾರುಗಳಿದ್ದವು. ಪ್ಯಾರಾ ಮಿಲಿಟರಿ ಪಡೆಯವರು ಈಗಾಗಲೇ ಆಗಮಿಸಿದ್ದು ಅವರೂ ಭದ್ರತೆಯಲ್ಲಿ ಪಾಲ್ಗೊಂಡಿದ್ದಾರೆ. ಸಂಜೆ ವೇಳೆ ಐಜಿಪಿ ಅವರು ಸಹ ಆಗಮಿಸಿ ವ್ಯವಸ್ಥೆಯನ್ನು ಅವಲೋಕಿಸಿದರು. ಬುಧವಾರ ರಿಹರ್ಸಲ್‌ನಲ್ಲಿ ಪಾಲ್ಗೊಂಡ 23 ಕಾರುಗಳಲ್ಲದೆ ರಾಜ್ಯಪಾಲರು, ಸಚಿವರ ಕಾರುಗಳು ಸೇರಿದಂತೆ ಇನ್ನೂ ಏಳು ಕಾರುಗಳು ಬರಲಿವೆ.
ಪೇಜಾವರ ಮಠದಲ್ಲಿ ರಾಷ್ಟ್ರಪತಿಗಳಿಗೆ ಕೊಡಲು ಶ್ರೀಕೃಷ್ಣ ಪ್ರತಿಮೆಯ ಆಕರ್ಷಕ ಸ್ಮರಣಿಕೆಯನ್ನು ಸಿದ್ಧಪಡಿಸಲಾಗಿದೆ. ಹೊರದ್ವಾರವನ್ನು ಅಲಂಕರಿಸಲಾಗಿದೆ. ಪೇಜಾವರ ಮಠ ಮತ್ತು ಶ್ರೀಕೃಷ್ಣಮಠದಲ್ಲಿ ಆಸನ ವ್ಯವಸ್ಥೆಗಳನ್ನು ಜೋಡಿಸಲಾಗಿದೆ. ಶ್ರೀಕೃಷ್ಣದರ್ಶನಕ್ಕೆ ಬೆಳಗ್ಗಿನಿಂದಲೇ ನಿರ್ಬಂಧಿಸಲಾಗಿದೆ. ಬೆಳಗ್ಗೆ 8 ಗಂಟೆಯೊಳಗೆ ಎಲ್ಲ ಪೂಜೆಗಳನ್ನು ಮುಗಿಸಲಾಗುತ್ತಿದೆ. ಅಪರಾಹ್ನ 3 ಗಂಟೆ ಅನಂತರವೇ ಭಕ್ತರಿಗೆ ಮತ್ತೆ ದೇವರ ದರ್ಶನ ಹಾಗೂ ಭೋಜನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುರುವಾರ ರಾಷ್ಟ್ರಪತಿಗಳ ಆಗಮನದ ವೇಳೆ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ತತ್ತ್ವಸಂಶೋಧನ ಸಂಸದ್ ಹೊರತಂದಿರುವ ‘ಮಹಾಭಾರತ’ದ ಇ ಬುಕ್ ಉದ್ಘಾಟಿಸುವ ಸಾಧ್ಯತೆ ಇದೆ.
ಪ್ರವಾಸಿ ಬಂಗ್ಲೆಯನ್ನು ರಾಷ್ಟ್ರಪತಿಗಳಿಗಾಗಿ ಸಿದ್ಧಪಡಿಸಲಾಗಿದ್ದರೂ ಅವರು ಅಲ್ಲಿಗೆ ಭೇಟಿ ಕೊಡುವ ಬಗ್ಗೆ ಖಾತ್ರಿ ಇಲ್ಲ. ರಾಷ್ಟ್ರಪತಿಯವರ ಜತೆ ಕರ್ನಾಟಕದ ರಾಜ್ಯಪಾಲ ವಜು ಭಾಯ್ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ, ಕೇಂದ್ರ ಸಚಿವೆ ಉಮಾ ಭಾರತಿ, ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರು ಪಾಲ್ಗೊಳ್ಳುವುದು ಖಚಿತವಾಗಿದೆ. ಮುಖ್ಯಮಂತ್ರಿಗಳು ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ರಾಷ್ಟ್ರಪತಿ ಭೇಟಿ ಸಂದರ್ಭ ಪೇಜಾವರ ಮಠದಲ್ಲಿ ಪೇಜಾವರ ಹಿರಿಯ ಮತ್ತು ಕಿರಿಯ ಸ್ವಾಮೀಜಿ, ಪರ್ಯಾಯ ಪಲಿಮಾರು ಸ್ವಾಮೀಜಿ ಭಾಗವಹಿಸುವರು. ಶ್ರೀಕೃಷ್ಣಮಠದಲ್ಲಿ ಈ ಮೂವರು ಸ್ವಾಮೀಜಿಯವರಲ್ಲದೆ ಸೋದೆ, ಕಾಣಿಯೂರು, ಅದಮಾರು ಕಿರಿಯ ಸ್ವಾಮೀಜಿ ಉಪಸ್ಥಿತರಿರುವರು.
ಆಯ್ದ ಬೆರಳೆಣಿಕೆ ವ್ಯಕ್ತಿಗಳಿಗೆ ಮಾತ್ರ ಪಾಸ್ ನೀಡಲಾಗಿದೆ. ಪೇಜಾವರ ಶ್ರೀಗಳು ಬುಧವಾರ ರಾತ್ರಿ ಬೆಂಗಳೂರಿನಿಂದ ಉಡುಪಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಥಬೀದಿ ಸುತ್ತಮುತ್ತಲಿನ ಅಂಗಡಿಗಳನ್ನು ಬುಧವಾರವೇ ಬಂದ್ ಮಾಡಿದ್ದರಿಂದ, ಜನರ ಸಂಚಾರಕ್ಕೆ ಇಂದೇ ನಿರ್ಬಂಧ ವಿಧಿಸಿದ್ದರಿಂದ ಸಾರ್ವಜನಿಕರಿಗೆ, ಭಕ್ತರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಬನ್ನಂಜೆ- ಕಲ್ಸಂಕ ರಸ್ತೆಗಳಲ್ಲಿ ವಾಹನ ಸಂಚಾರ ವ್ಯತ್ಯಯವಾದ ಕಾರಣ ವ್ಯಾಪಾರಸ್ಥರಿಗೆ ತೊಂದರೆಯಾಯಿತು.