ಭೀಮಾ ಕೋರೆಗಾಂವ್: ಹೋರಾಟಗಾರ ವಿರುದ್ಧದ ದೋಷಾರೋಪಣೆಯಲ್ಲಿ ಹಲವು ಲೋಪಗಳು
ಮಾಧ್ಯಮ ವರದಿ
ಹೊಸದಿಲ್ಲಿ,ಡಿ.26: ಭೀಮಾ ಕೋರೆಗಾಂವ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಾವೋವಾದಿಗಳ ಜೊತೆ ಸಂಪರ್ಕವಿದೆ ಎಂಬ ಆರೋಪದಲ್ಲಿ ಜೂನ್ ತಿಂಗಳಲ್ಲಿ ಬಂಧಿಸಲಾಗಿರುವ ವಕೀಲರು, ಹಕ್ಕುಗಳು ಹೋರಾಟಗಾರರು, ಕವಿಗಳು ಮತ್ತು ಉಪನ್ಯಾಸಕರ ವಿರುದ್ಧ ಸಲ್ಲಿಸಲಾಗಿರುವ ದೋಷಾರೋಪಣೆಯಲ್ಲಿ ಹಲವಾರು ಲೋಪಗಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಜನವರಿ ಒಂದರಂದು ಪುಣೆ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಸಭೆಯ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ಹೋರಾಟಗಾರರಾದ ಸುಧೀರ್ ಧವಲೆ, ರೋನಾ ವಿಲ್ಸನ್, ಸುರೇಂದ್ರ ಗಡ್ಲಿಂಗ್, ಶೋಮಾ ಸೇನ್ ಮತ್ತು ಮಹೇಶ್ ರಾವತ್‌ರನ್ನು ಬಂಧಿಸಲಾಗಿತ್ತು. ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಪೊಲೀಸರು ಪುಣೆ ನ್ಯಾಯಾಲಯದಲ್ಲಿ 5,600 ಪುಟಗಳ ದೋಷಾರೋಪಣೆ ಸಲ್ಲಿಸಿದ್ದರು. ಈ ದೋಷಾರೋಪಣೆಯಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರದ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುವ ಯೋಜನೆ ಸೇರಿದಂತೆ ಹಿಂಸಾತ್ಮಕ ದಾಳಿಗಳನ್ನು ನಡೆಸಲು ಮಾವೋವಾದಿಗಳು ಹುನ್ನಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು
ಈ ಬಗ್ಗೆ ಎನ್‌ಡಿಟಿವಿ ಪರಿಶೀಲನೆ ನಡೆಸಿದಾಗ ಪೊಲೀಸರು ಸಲ್ಲಿಸಿರುವ ದೋಷಾರೋಪಣೆಯಲ್ಲಿ ಅನೇಕ ಲೋಪಗಳಿರುವುದು ಕಂಡುಬಂದಿದೆ. ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಕರಪತ್ರಗಳಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ವಿರೋಧಿ ಬರಹಗಳು ಇವೆಯೇ ಹೊರತು ಇದರಲ್ಲಿ ಮಾವೋವಾದಿ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಲಾಗಿಲ್ಲ ಎಂದು ಮಾಧ್ಯಮ ವರದಿ ತಿಳಿಸಿದೆ.
ಈ ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಪಿ.ಬಿ ಸಾವಂತ್ ಮತ್ತು ಕೊಲ್ಸೆ ಪಾಟಿಲ್ ಸಂಘಟಿಸಿದ್ದರು ಎಂದು ದಲಿತ ಹಾಗೂ ಇತರ ಸಾಮಾಜಿಕ ಸಂಘಟನೆಯ ಆರು ಮಂದಿ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಪೊಲೀಸರು ಈವರೆಗೂ ಈ ನ್ಯಾಯಾಧೀಶರ ಹೇಳಿಕೆಗಳನ್ನು ದಾಖಲಿಸಿಲ್ಲ ಎಂದು ಬಂಧಿತರ ಪರ ವಕೀಲರು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬುದಕ್ಕೆ ಪೊಲೀಸರು ಹೆಚ್ಚಿನ ಸಾಕ್ಷಿಯನ್ನು ಕಲೆ ಹಾಕುವಲ್ಲೂ ವಿಫಲವಾಗಿದ್ದಾರೆ. ಈ ಆರೋಪವು, ಕಾಮ್ರೆಡ್ ಆರ್ ಮತ್ತು ಕಾಮ್ರೆಡ್ ಪ್ರಕಾಶ್ ಮಧ್ಯೆ ನಡೆದ ಪತ್ರ ಸಂಭಾಷಣೆಯನ್ನು ಆಧಾರವಾಗಿಟ್ಟು ಮಾಡಲಾಗಿದೆ. ಆದರೆ ಈ ಪತ್ರ ಸೇರಿದಂತೆ ಇತರ ಪತ್ರಗಳ ನೈಜತೆಯ ಬಗ್ಗೆ ತಜ್ಞರೇ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.