ನಿವೇಶನ ನೋಂದಣಿ ಮಾಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ: ಅಧಿಕಾರಿಯಿಂದ ದೂರು ದಾಖಲು

ಶಿವಮೊಗ್ಗ, ಡಿ. 26: ನಿವೇಶನ ಮಂಜೂರಾತಿಯ ಬಗ್ಗೆ ವಿವರ ಕಲೆ ಹಾಕಲು ಇಲ್ಲಿನ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಗೆ ಆಗಮಿಸಿದ್ದ ಇಲಾಖೆಯೊಂದರ ಹಿರಿಯ ಅಧಿಕಾರಿಗೆ, ವಂಚಕನೋರ್ವ ಲಕ್ಷಾಂತರ ರೂ. ವಂಚಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಪ್ರಸ್ತುತ ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿರುವ ಕೆ. ರಂಗಸ್ವಾಮಿ ವಂಚನೆಗೊಳಗಾದ ಅಧಿಕಾರಿ ಎಂದು ಗುರುತಿಸಲಾಗಿದೆ. ತಮಗೆ 1.58 ಲಕ್ಷ ರೂ.ಗಳನ್ನು ವಂಚಿಸಲಾಗಿದೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿ ಖ್ಯಾತಿಯ ಪಿಎಸ್ಐ ಎನ್.ಎಸ್.ರವಿ ನೇತೃತ್ವದ ಪೊಲೀಸ್ ತಂಡ, ವಂಚಕನ ಪತ್ತೆಗೆ ತನಿಖೆ ತೀವ್ರಗೊಳಿಸಿದೆ.
ಘಟನೆ ಹಿನ್ನೆಲೆ: ಕಳೆದ ಐದಾರು ವರ್ಷಗಳ ಹಿಂದೆ, ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರ ರಚಿಸಿದ್ದ ಬಡಾವಣೆಯೊಂದರಲ್ಲಿ ನಿವೇಶನಕ್ಕೆ ದೂರುದಾರ ಕೆ.
ರಂಗಸ್ವಾಮಿಯವರು ಅರ್ಜಿ ಸಲ್ಲಿಸಿದ್ದರು. ನಿವೇಶನ ಮಂಜೂರಾಗಿದೆಯೇ, ಇಲ್ಲವೇ ಎಂಬುವುದರ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಅಧಿಕಾರಿಯು ಸೋಮವಾರ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಗೆ ಆಗಮಿಸಿದ್ದಾರೆ.
ಕಚೇರಿ ಬಳಿ ಓಡಾಡಿಕೊಂಡಿದ್ದ ವಂಚಕನು, ತಾನು ಈ ಕಚೇರಿಯ ನೌಕರನೆಂದು ಪರಿಚಯಿಸಿಕೊಂಡಿದ್ದಾನೆ. ಅವರ ಬಳಿಯಿದ್ದ ದಾಖಲೆ ಪಡೆದುಕೊಂಡಿದ್ದಾನೆ. ಪ್ರಾಧಿಕಾರದ ನೌಕರರ ಬಳಿ ಚರ್ಚಿಸುವ ನಾಟಕ ಮಾಡಿದ್ದಾನೆ. ಕಚೇರಿಯ ಕೆಲ ವಿಭಾಗಗಳಿಗೆ ಓಡಾಡಿದ್ದಾನೆ. ನಂತರ ಅವರನ್ನು ಸಮೀಪದ ಸಬ್ ರಿಜಿಸ್ಟಾರ್ ಕಚೇರಿಗೆ ಕರೆ ತಂದಿದ್ದಾನೆ. ಅಲ್ಲಿಯೂ ಕೂಡ ಅಲ್ಲಿನ ಕೆಲ ಸಿಬ್ಬಂದಿಗಳ ಜೊತೆ ಮಾತಾಡಿ, ಏನೇನೂ ಬರೆದುಕೊಂಡಿದ್ದಾನೆ. ತದನಂತರ ದೂರುದಾರರ ಬಳಿ ಆಗಮಿಸಿ, 'ನೀವು ಅದೃಷ್ಟವಂತರು. ಕಳೆದ ಕೆಲ ವರ್ಷಗಳ ಹಿಂದೆಯೇ ನಿಮಗೆ ನಿವೇಶನ ಮಂಜೂರಾಗಿದೆ. ತಕ್ಷಣವೇ ನಿಮ್ಮ ನಿವೇಶನ ನೊಂದಣಿ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ರದ್ದಾಗುತ್ತದೆ' ಎಂದು ಹೇಳಿದ್ದಾನೆ. ವಂಚಕನ ಮಾತು ನಂಬಿದ ದೂರುದಾರ ಅಧಿಕಾರಿಯು, 1.58 ಲಕ್ಷ ರೂ.ಗಳನ್ನು ಸಂಗ್ರಹಿಸಿ ತಂದಿದ್ದಾರೆ. ಪ್ರಾಧಿಕಾರದ ಕಚೇರಿಯ ಬಳಿ ವಂಚಕನಿಗೆ ನೀಡಿದ್ದಾರೆ.
'ಪ್ರಾಧಿಕಾರದ ಅಧಿಕಾರಿಗಳು ಊಟಕ್ಕೆ ಹೋಗಿದ್ದಾರೆ. ಅಧಿಕಾರಿಗಳ ಮನೆಗೆ ಹೋಗಿ ಸಹಿ ಹಾಕಿಸಿಕೊಂಡು ಬರುತ್ತೆನೆ' ಎಂದು ದೂರುದಾರರಿಗೆ ತಿಳಿಸಿ ವಂಚಕ ಹೋಗಿದ್ದಾನೆ. ಆದರೆ ಎಷ್ಟೇ ಹೊತ್ತಾದರೂ ವಂಚಕನು ಕಚೇರಿಯತ್ತ ತಲೆ ಹಾಕಿಲ್ಲ. ಇದರಿಂದ ಅನುಮಾನಗೊಂಡ ದೂರುದಾರರು, ಕಚೇರಿಯ ಇತರೆ ಸಿಬ್ಬಂದಿಗಳ ಬಳಿ ತೆರಳಿ ವಿಷಯ ತಿಳಿಸಿದ್ದಾರೆ. ಈ ವೇಳೆ ವಂಚನೆಗೊಳಗಾಗಿರುವುದನ್ನರಿತ ದೂರುದಾರರು ವಿನೋಬನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಸಿ. ಸಿ. ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆ!
ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಯ ಪ್ರತಿಯೊಂದು ವಿಭಾಗದಲ್ಲಿಯೂ ಸಿ.ಸಿ. ಕ್ಯಾಮರ ಅಳವಡಿಸಲಾಗಿದೆ. ವಂಚಕನು ವಿವಿಧ ವಿಭಾಗಗಳಿಗೆ ಓಡಾಡುತ್ತಿರುವ ದೃಶ್ಯಾವಳಿಯು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಸಂಗ್ರಹಿಸಿರುವ ಸಬ್ ಇನ್ಸ್ಪೆಕ್ಟರ್ ಎನ್.ಎಸ್.ರವಿಯವರು ತನಿಖೆ ತೀವ್ರಗೊಳಿಸಿದ್ದಾರೆ. ಹಾಗೆಯೇ ಸೂಡಾ ಹಾಗೂ ಸಬ್ ರಿಜಿಸ್ಟಾರ್ ಕಚೇರಿಗಳಿಗೆ ಪೊಲೀಸರು ಭೇಟಿಯಿತ್ತು ಅಲ್ಲಿನ ಸಿಬ್ಬಂದಿಗಳಿಂದ ಮಾಹಿತಿ ಕೂಡ ಕಲೆ ಹಾಕಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.







