ಮಣಿಪಾಲ: ಮಹಿಳೆಯ ಸೊತ್ತು ದರೋಡೆ ಪ್ರಕರಣ; ಆರೋಪಿಗಳ ಸೆರೆ

ಮಣಿಪಾಲ, ಡಿ. 26: ಮಂಗಳವಾರ ರಾತ್ರಿ ಮಣಿಪಾಲ ಠಾಣಾ ವ್ಯಾಪ್ತಿಯ ಕೆಎಂಸಿ ಆಸ್ಪತ್ರೆಯ ಬಾಳಿಗಾ ಬ್ಲಾಕ್ ಬಳಿ ನಡೆದುಕೊಂಡು ಹೋಗುತಿದ್ದ ಒಂಟಿ ಮಹಿಳೆಯ ಬ್ಯಾಗ್‌ನ್ನು ಸೆಳೆದುಕೊಂಡು ಹೋದ ಪ್ರಕರಣವನ್ನು ಇತೀ ಶೀಘ್ರವಾಗಿ ಕಡಿಮೆ ಸಮಯದಲ್ಲಿ ಭೇದಿಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ ಒಬ್ಬ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನಾಗಿದ್ದು, ಇನ್ನೊಬ್ಬನನ್ನು ಉದ್ಯಾವರ ಮೇಲ್ಪೆಟೆ ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಫಹಾದ್ (19) ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬುಧವಾರ ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಸುಲಿಗೆ ಮಾಡಿದ್ದ 80,000ರೂ. ಮೌಲ್ಯದ ಐ ಫೋನ್ , ವ್ಯಾನಿಟಿ ಬ್ಯಾಗ್, 2 ಎಟಿಎಂ ಕಾರ್ಡ್, ಡಿಎಲ್, ನಗದು ಹಣ 1,810ರೂ. ಹಾಗೂ ಕೃತ್ಯಕ್ಕೆ ಬಳಸಿದ ನಂಬರ್ ಪ್ಲೇಟ್ ಇಲ್ಲದ ಹೊಸ ಬಜಾಜ್ ಪಲ್ಸರ್ ಎನ್.ಎಸ್. ಬೈಕ್ ಹಾಗೂ ಹೆಲ್ಮ್‌ಟ್‌ಗಳನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದ್ದು, ಇವುಗಳ ಮೌಲ್ಯ 2,25,000 ರೂ.ಗಳೆಂದು ಅಂದಾಜಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ.ನಿಂಬರಗಿ ಇವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ.ಆರ್.ಜೈಶಂಕರ್ ಇವರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್‌ಸ್ಪೆಕ್ಟರ್ ಸಿ.ಕಿರಣ್ ಹಾಗೂ ಮಣಿಪಾಲ ಠಾಣೆಯ ಇನ್‌ಸ್ಪೆಕ್ಟರ್ ಸುದರ್ಶನ್ ಇವರ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.







