ಕಾಮರಾಜ್‌ರ ನೆನಪಿನಾರ್ಥ ಡಿ.28 ರಿಂದ ರಾಷ್ಟ್ರೀಯ ಸಮ್ಮೇಳನ
ಬೆಂಗಳೂರು, ಡಿ.26: ಕಾಮರಾಜ್ ಫೌಂಡೇಷನ್ ವತಿಯಿಂದ ರಾಷ್ಟ್ರೀಯ ಸಮ್ಮೇಳನವನ್ನು ನಗರದ ಬಿ.ಅರಸೋಜಿ ರಾವ್ ಚಾರಿಟೀಸ್ ಕಲ್ಯಾಣಮಂಟಪದಲ್ಲಿ ಡಿ.28 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಹೋರಾಟಗಾರ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಪಾರವಾದ ಸೇವೆ ಸಲ್ಲಿಸಿರುವ ಕಾಮರಾಜ್‌ರ ನೆನಪಿನಾರ್ಥವಾಗಿ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಭಾಗವಾಗಿ ಕಾಮರಾಜ್ ಆಡಳಿತ ಹಾಗೂ ಇಂದಿನ ರಾಜಕಾರಣ, ಕರ್ನಾಟಕದೊಂದಿಗೆ ಕಾಮರಾಜ್ ಅವರ ಸಂಬಂಧ ಹಾಗೂ ಸಮಾಜವಾದ ಮತ್ತು ಪ್ರಜಾಪ್ರಭುತ್ವ ವಿಷಯದ ಕುರಿತು ಚರ್ಚೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸಮ್ಮೇಳನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಬಿ.ಝಡ್.ಝಮೀರ್ ಅಹ್ಮದ್ ಖಾನ್, ಯು.ಟಿ.ಖಾದರ್, ಜಯಮಾಲ ಹಾಗೂ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.





