ಗ್ರಾಮ ವಿಕಾಸ ಯೋಜನೆಯಲ್ಲಿ ಹಣ ದುರುಪಯೋಗ: ಕಿರುಗುಂದ ಗ್ರಾಪಂ ಮಾಜಿ ಅಧ್ಯಕ್ಷ ಆರೋಪ
ಸಿಇಒಗೆ ದೂರು
ಮೂಡಿಗೆರೆ, ಡಿ.26: ಗ್ರಾಮವಿಕಾಸ ಯೋಜನೆಗೆ ಸರಕಾರ ಆಯ್ಕೆ ಮಾಡಿರುವ ಕಿರುಗುಂದ ಗ್ರಾಪಂ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿ ಸೌಲಭ್ಯಗಳ ಹಂಚಿಕೆಯಲ್ಲಿ ಹಣ ದುರುಪಯೋಗವಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್.ನಝೀರ್ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮವಿಕಾಸ ಯೋಜನೆಯಡಿ ಉದುಸೆ ಗ್ರಾಮಕ್ಕೆ ಸರ್ಕಾರದಿಂದ 75 ಲಕ್ಷ ರೂ.ಅನುದಾನ ಲಭಿಸಿದ್ದು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದವರು ಕಾಮಗಾರಿಗಳ ನಿರ್ವಹಣೆ ಮಾಡುತ್ತಿದ್ದಾರೆ. ಕಾಂಕ್ರೀಟ್ ರಸ್ತೆಯೊಂದು ನಿರ್ಮಿಸಲಾಗಿದೆ. ಇನ್ನುಳಿದ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಈ ಯೋಜನೆಯಡಿ ಎಲ್‍ಇಡಿ ಬೀದಿದೀಪ ಅಳವಡಿಸಲು ಅಂದಾಜು ಪಟ್ಟಿಯಲ್ಲಿ 2.25 ಲಕ್ಷ ರೂ. ನಿಗದಿಪಡಿಸಿ 36 ಎಲ್‍ಇಡಿ ಲೈಟ್‍ಗಳನ್ನು ಸಂಬಂಧಿಸಿದ ಇಲಾಖೆಯ ಗುತ್ತಿಗೆದಾರರ ಮೂಲಕ ವಿದ್ಯುತ್ ಕಂಬಗಳಿಗೆ ಅಳವಡಿಸಲಾಗಿದೆ.
ಈ ಎಲ್‍ಇಡಿ ಲೈಟ್‍ಗಳ ದರ ತಲಾ ರೂ.6250 ಗಳಾಗಿರುತ್ತದೆ. ಆದರೆ ಈಗ ಅಳವಡಿಸಿರುವ ಈ ಉಪಕರಣಗಳು ಐಎಸ್‍ಐ ನೋಂದಾಯಿತ ಉಪಕರಣಗಳಲ್ಲ. ಇದಕ್ಕೆ ಗರಿಷ್ಠ ರೂ.1500 ಬೆಲೆ ಇರಬಹುದು. ಇಂತಹ ಎಲ್‍ಇಡಿ ಉಪಕರಣಗಳು ಕಳಪೆಯಿಂದ ಕೂಡಿದ್ದು, ಕೆಲವು ಉಪಕರಣಗಳು ಕೆಟ್ಟು ಹೋಗಿವೆ. ಲೈಟ್‍ಗಳು ಉರಿಯುತ್ತಿಲ್ಲ. ಇದಲ್ಲದೆ 1.50 ಲಕ್ಷ ಅಂದಾಜು ವೆಚ್ಚದಲ್ಲಿ ಸಿಸಿ ಕ್ಯಾಮರಾವನ್ನು ಗ್ರಾಪಂ ಕಚೇರಿಗೆ ಅಳವಡಿಸಲು ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಸುಮಾರು 2 ವರ್ಷಗಳಿಂದ ಸಿಸಿ ಕ್ಯಾಮರಾವನ್ನು ಅಳವಡಿಸಿಲ್ಲ. ಹೀಗಾಗಿ ಹಣ ದುರುಪಯೋಗವಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಸಿಇಒಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.







