ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ: ಬೆಳ್ತಂಗಡಿ ಮೂಲದ ದಂಪತಿ ಮೃತ್ಯು

ಬೆಳ್ತಂಗಡಿ, ಡಿ. 26: ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪೆರಾಡಿ ಮೂಲದ ನಿವಾಸಿ, ಮುಂಬೈಯ ಉದ್ಯಮಿ ದಂಪತಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಮೂಲತಃ ಪೆರಾಡಿಯ ಬಂಡಸಾಲೆ ನಿವಾಸಿಗಳಾಗಿದ್ದು, ಸದ್ಯ ಮುಂಬೈಯಲ್ಲಿ ಉದ್ಯಮಿಯಾಗಿದ್ದ ಅನಿಲ್ ಟಿ. ಶೆಟ್ಟಿ (65) ಮತ್ತು ಕುಶಲ ಶೆಟ್ಟಿ (55) ಮೃತ ದಂಪತಿಯಾಗಿದ್ದಾರೆ. ಇವರ ಪುತ್ರ ಶೈಲೇಂದ್ರ ಎಂಬವರ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ
ಅನಿಲ್ ಶೆಟ್ಟಿಯ ಮಾವ ಪೆರಾಡಿ ಬಂಡಸಾಲೆ ಸಂಜೀವ ಶೆಟ್ಟಿ ಎಂಬವರ ಪುತ್ರ ಸುಜಿತ್ ಶೆಟ್ಟಿಯ ವಿವಾಹವು ಶುಕ್ರವಾರ ಮೂಡುಬಿದಿರೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅನಿಲ್ ಶೆಟ್ಟಿ ದಂಪತಿ ಇಂದು ಪುತ್ರ ಶೈಲೇಂದ್ರರ ಜೊತೆ ಕಾರಿನಲ್ಲಿ ಹುಬ್ಬಳ್ಳಿ -ಧಾರವಾಡ ಮಾರ್ಗವಾಗಿ ಪೆರಾಡಿಗೆ ಹೊರಟಿದ್ದರು. ಈ ಮಧ್ಯೆ ಕಾರು ಚಾಲಕನ ನಿಯಂತ್ರಣ ತಪ್ಪಿ ಹುಬ್ಬಳ್ಳಿ -ಧಾರವಾಡ ಹೆದ್ದಾರಿ ಬಳಿ ನಿಂತಿದ್ದ ಟ್ಯಾಂಕರ್‌ವೊಂದಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಅನಿಲ್ ಶೆಟ್ಟಿ ಮತ್ತು ಕುಶಲ ಶೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಲಾಯಿಸುತ್ತಿದ್ದ ಶೈಲೇಂದ್ರ ಗಂಭೀರ ಗಾಯಗೊಂಡಿದ್ದಾರೆ. ಈ ದುರಂತದ ಬಗ್ಗೆ ತಿಳಿಯುತ್ತಿದ್ದಂತೆ ಸುಜಿತ್ ಶೆಟ್ಟಿಯ ಮದುವೆಯ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಗುರುವಾರ ಬೆಳಗ್ಗೆ ಮೃತದೇಹ ಅವರ ಮನೆ ಸೇರುವ ನಿರೀಕ್ಷೆ ಇದೆ.
ದೂರದ ಮುಂಬೈಯಲ್ಲಿದ್ದರೂ ಊರಿನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅನಿಲ್ ಶೆಟ್ಟಿ ಕೊಡುಗೈ ದಾನಿಯಾಗಿದ್ದರು. ಅನೇಕ ಸಾಮಾಜಿಕ ಸೇವಾ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.