ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೊತೆ ಕೈಜೋಡಿಸಲು ಸಿದ್ಧ: ಶಿವಪಾಲ್ ಯಾದವ್
ಲೋಕಸಭಾ ಚುನಾವಣೆ

ಲಕ್ನೋ, ಡಿ.26: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆ ಕೈಜೋಡಿಸಲು ತಾನು ಸಿದ್ಧ ಎಂದು ಸಮಾಜವಾದಿ ಪಕ್ಷದಿಂದ ಬಂಡೆದ್ದು ಪ್ರಗತಿಶೀಲ ಸಮಾಜವಾದಿ ಪಕ್ಷ ಎಂಬ ನೂತನ ಪಕ್ಷವನ್ನು ಸ್ಥಾಪಿಸಿರುವ ಶಿವಪಾಲ್ ಯಾದವ್ ಘೋಷಿಸಿದ್ದಾರೆ. ರಾ
ಜ್ಯದ 75 ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಸಂಘಟನೆಯಿದೆ. ಬಿಜೆಪಿಯನ್ನು ಸೋಲಿಸಲು ಎಲ್ಲಾ ಸ್ಥಾನಗಳಲ್ಲೂ ತಮ್ಮ ಪಕ್ಷ ಸ್ಪರ್ಧಿಸಲಿದೆ. ಅಲ್ಲದೆ ಕಾಂಗ್ರೆಸ್ ಜೊತೆ ಮೈತ್ರಿ ಸಾಧಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು . ಬಿಜೆಪಿಯನ್ನು ಸೋಲಿಸಲು ಮಹಾಮೈತ್ರಿಕೂಟ ರಚಿಸಲು ಬಯಸುವವರು ತಮ್ಮ ಪಕ್ಷದ ಜೊತೆಗೂ ಮಾತುಕತೆ ನಡೆಸಬೇಕು ಎಂದು ಯಾದವ್ ಹೇಳಿದ್ದಾರೆ. ಹನುಮಂತ ದೇವರ ಕುರಿತ ವಿವಾದದ ಬಗ್ಗೆ ಉಲ್ಲೇಖಿಸಿದ ಅವರು, “ಹನುಮಂತನನ್ನು ದೇವರೆಂದು ನಾವು ನಂಬುತ್ತೇವೆ. ಹನುಮಂತನನ್ನೂ ನಿರ್ಧಿಷ್ಟ ಜಾತಿಗೆ ಸೀಮಿತಗೊಳಿಸುತ್ತಿರುವುದು ಅಂತಹ ವ್ಯಕ್ತಿಗಳ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ” ಎಂದರು.
ವಿವಾದಿತ ಭೂಮಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಹಠ ಸಲ್ಲದು. ಸರಯೂ ನದಿಯ ಸುತ್ತಮುತ್ತ ಸಾಕಷ್ಟು ಜಮೀನಿದೆ. ಅಲ್ಲಿ ರಾಮಮಂದಿರ ನಿರ್ಮಿಸಿದರೆ ತಾನೂ ಆ ಕಾರ್ಯಕ್ಕೆ ಕೊಡುಗೆ ನೀಡುತ್ತೇನೆ ಎಂದು ಶಿವಪಾಲ್ ಯಾದವ್ ಹೇಳಿದರು.





