ಚಿಕ್ಕಮಗಳೂರು: ಬ್ಯಾಂಕ್‍ಗಳ ವಿಲೀನೀಕರಣ ಖಂಡಿಸಿ ಬ್ಯಾಂಕ್ ಸಿಬ್ಬಂದಿ ಮುಷ್ಕರ
ಕೇಂದ್ರದ ವಿರುದ್ಧ ನೌಕರರಿಂದ ವ್ಯಾಪಕ ಆಕ್ರೋಶ

ಚಿಕ್ಕಮಗಳೂರು, ಡಿ.26: ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆಯ ಕರೆಯ ಮೇರೆಗೆ ನಡೆದ ಅಖಿಲ ಭಾರತ ಬ್ಯಾಂಕ್ ಮುಷ್ಕರದ ಅಂಗವಾಗಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ನಗರದ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಬುಧವಾರ ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕೆನರಾ ಬ್ಯಾಂಕಿನ ನೌಕರ ಬಸವರಾಜ್ ಮಾತನಾಡಿ, ಕೇಂದ್ರ ಸರಕಾರ ಎಸ್.ಬಿ.ಐ. ಸಹವರ್ತಿ ಬ್ಯಾಂಕ್‍ಗಳ ವಿಲೀನದಿಂದ ಬಂದಿರುವ ಫಲಿತಾಂಶ ನಕಾರಾತ್ಮಕವಾಗಿದ್ದು, ಪ್ರಥಮ ಬಾರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ವಿಲೀನದ ತರುವಾಯ ತನ್ನ ಬ್ಯಾಲನ್ಸ್ ಶೀಟ್‍ನಲ್ಲಿ ನಷ್ಟ ತೋರಿಸಿದೆ. ಭಾರತಕ್ಕೆ ಬೇಕಿರುವುದು ಬ್ಯಾಂಕುಗಳ ವಿಲೀನಿಕರಣವಲ್ಲ, ಬ್ಯಾಂಕುಗಳ ವಿಸ್ತರಣೆ ಆಗಬೇಕಿದೆ. ಅನೇಕ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಬ್ಯಾಂಕುಗಳು ಹೆಚ್ಚು ವಿಸ್ತರಣೆ ಆಗಿಲ್ಲ. ಸುಸ್ತಿ ಸಾಲಗಳು ಮರುಪಾವತಿಯಾಗುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದರ ಮೂಲಕ ಬ್ಯಾಂಕ್ ಕ್ಷೇತ್ರದ ಆರೋಗ್ಯವನ್ನು ಸುಧಾರಿಸಬೇಕಾಗಿದೆ ಎಂದರು.
ಆದರೂ ಬುದ್ಧಿ ಕಲಿಯದೆ ಕೇಂದ್ರ ಸರಕಾರ ತನ್ನ ಬ್ಯಾಂಕ್‍ಗಳ ವಿಲೀನದ ಕಾರ್ಯ ಮುಂದುವರೆಸಿದ್ದು, ಸದ್ಯ ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್‍ಗಳನ್ನು ವಿಲೀನಗೊಳಿಸಲು ಮುಂದಾಗಿದ್ದು, ಹಾಗೂ ಮುಂದಿನ ದಿನಗಳಲ್ಲಿ ಇನ್ನು ಹಲವು ಬ್ಯಾಂಕ್‍ಗಳನ್ನು ವಿಲೀನ ಗೊಳಿಸಲು ಮುಂದುವರೆಯುತ್ತಿರುವುದು ವಿಪರ್ಯಾಸ ಎಂದರು.
ಜಯಪ್ರಕಾಶ್ ಮಾತನಾಡಿ, ವಿಲೀನ ಪ್ರಕ್ರಿಯೆಯಿಂದ ನಮ್ಮ ದೇಶದ ಆರ್ಥಿಕತೆಗಾಗಲಿ ಅಥವಾ ಜನತೆಗಾಗಲಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದು ಉದ್ಯೋಗಿಗಳ ಕೆಲಸಕ್ಕೆ, ಕೆಲಸದ ಭದ್ರತೆಗೆ ಹಾಗೂ ಅವರ ಹಿತಾಸಕ್ತಿಗಳಿಗೆ ಭಾದಕಗಳಾಗಿರುತ್ತದೆ. ಅಲ್ಲದೆ ಇದರಿಂದ ಬ್ಯಾಂಕುಗಳಲ್ಲಿನ ಉದ್ಯೋಗಾವಕಾಶಗಳಿಗೂ ಕುತ್ತುಂಟಾಗುತ್ತಿದೆ ಎಂದರು.
ಸರಕಾರ ಸುಸ್ತಿಯಾಗಿರುವ ಸಾಲಗಳನ್ನು ಮರುಪಾವತಿಸುವಂತಹ ಕ್ರಮಗಳನ್ನು ಜಾರಿಮಾಡುವುದರತ್ತ ಗಮನವನ್ನು ಹರಿಸುವ ಬದಲು ವಿಲೀನ ಪ್ರಕ್ರಿಯೆ ಮುಂದುವರಿಸಿ ವಿಫಲ ಕಾಣುತ್ತಿದೆ. ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಸಹವರ್ತಿ ಬ್ಯಾಂಕುಗಳ ವಿಲೀನಿಕರಣ ಹಾನಿಕಾರಕವಾಗಿ ಪರಿಣಮಿಸಿದೆ. ಅನೇಕ ಶಾಖೆಗಳನ್ನು ಮುಚ್ಚಲಾಗಿದೆ. ಇದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ. ವ್ಯಾಪಾರ ವಹಿವಾಟುಗಳು ಕುಂಟಿತಗೊಂಡಿದೆ, ಮರುಪಾವತಿಯಾಗದ ಸಾಲಗಳು ಹೆಚ್ಚಾಗಿವೆ ಎಂದರು.
ಪ್ರತಿಭಟನೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ರೇವಣ್ಣ, ಎಸ್.ಬಿ.ಐ ಬ್ಯಾಂಕಿನ ಚಂದ್ರಪ್ಪ, ಕೆನರಾ ಬ್ಯಾಂಕ್ ಅಧಿಕಾರಿ ಯೂಸುಫ್ ಹಾಗು ಇನ್ನಿತರೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.







