ಮಾಯಾಂಕ್ ಕುರಿತು ಅಗೌರವದ ಮಾತಿಗೆ ಕ್ಷಮೆ ಕೋರಿದ ಆಸ್ಟೇಲಿಯದ ಮಾಜಿ ಕ್ರಿಕೆಟಿಗ !

ಮೆಲ್ಬೋರ್ನ್, ಡಿ.26: ಭಾರತದ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಹಾಗೂ ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್ ಪದ್ಧತಿ ಬಗ್ಗೆ ಆಸ್ಟೇಲಿಯದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಗಾರ ಕೆರ್ರಿ ಓ’ಕೀಫ್ ಅಗೌರವದ ಮಾತನ್ನಾಡಿದ್ದಾರೆ. ಇದರಿಂದ ಕುಪಿತಗೊಂಡ ಭಾರತದ ಕ್ರಿಕೆಟ್ ಅಭಿಮಾನಿಗಳು ಟ್ವಿಟರ್‌ನ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಬುಧವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ವೀಕ್ಷಕವಿವರಣೆ ವೇಳೆ ಓ’ಕೀಫ್ ತನ್ನ ನಾಲಿಗೆ ಹರಿಬಿಟ್ಟಿದ್ದು ಬಳಿಕ ತನ್ನ ಮಾತಿಗೆ ಕ್ಷಮೆ ಕೋರಿದರು.
ಕಳೆದ ವರ್ಷ ರಣಜಿ ಟ್ರೋಫಿ ವೇಳೆ ರೈಲ್ವೇಸ್ ವಿರುದ್ಧ ತ್ರಿಶತಕ ಸಿಡಿಸಿದ್ದ ಮಾಯಾಂಕ್ ಇನಿಂಗ್ಸ್ ಬಗ್ಗೆ ಉಲ್ಲೇಖಿಸಿದ ಓ’ಕೀಫ್, ‘‘ಮಾಯಾಂಕ್ ಅವರು ರೈಲ್ವೇಯ ಕ್ಯಾಂಟೀನ್ ಸಿಬ್ಬಂದಿ ಅಥವಾ ವೈಟರ್‌ಗಳಿರುವ ತಂಡದ ವಿರುದ್ಧ ತ್ರಿಶತಕ ಗಳಿಸಿರಬೇಕು. ಬಹುಶಃ ಪಂದ್ಯದ ಬೌಲರ್‌ಗಳು ರೈಲ್ವೆ ಸಿಬ್ಬಂದಿಯಿರಬಹುದು’’ ಎಂದು ಹೇಳಿದ್ದರು. ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಪದ್ಧತಿಯ ಗುಣಮಟ್ಟವನ್ನು ಪ್ರಶ್ನಿಸುವ ಜೊತೆಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಮಾಯಾಂಕ್ ಬಗ್ಗೆ ಓ’ಕೀಫ್ ನೀಡಿರುವ ಹೇಳಿಕೆ ವಿವಾದ ಹುಟ್ಟುಹಾಕಿತು. ಮಾಯಾಂಕ್ ತನ್ನ ಮೊದಲ ಪಂದ್ಯದಲ್ಲಿ 161 ಎಸೆತಗಳಲ್ಲಿ 76 ರನ್ ಗಳಿಸಿ ಒ‘ಕೀಫ್ ಬಾಯಿಮುಚ್ಚಿಸಲು ಯಶಸ್ವಿಯಾಗಿದ್ದಾರೆ. 69ರ ಹರೆಯದ ಓ’ಕೀಫೆ ಲೆಗ್ ಸ್ಪಿನ್ನರ್ ಆಗಿದ್ದು 1971ರಿಂದ 77ರ ತನಕ ಆಸ್ಟ್ರೇಲಿಯ ಪರ 24 ಟೆಸ್ಟ್ ಪಂದ್ಯಗಳನ್ನಾಡಿ 53 ವಿಕೆಟ್‌ಗಳನ್ನು ಪಡೆದಿದ್ದರು.
ಓ’ಕೀಫೆ ಮಾತಿನಿಂದ ಕೆರಳಿರುವ ಭಾರತದ ಅಭಿಮಾನಿಯೊಬ್ಬ, ಭಾರತದ ದೇಶೀಯ ಕ್ರಿಕೆಟ್‌ನಿಂದಲೇ ವಿರಾಟ್ ಕೊಹ್ಲಿಯೆಂಬ ವಿಶ್ವಶ್ರೇಷ್ಠ ಆಟಗಾರ ಮೂಡಿಬಂದಿದ್ದಾನೆಂದು ನೆನಪಿಸಿದ್ದಾರೆ.
‘‘ಅಹಂಕಾರಿ ಓ’ಕೀಫ್‌ಗೆ ಭಾರತದ ರಣಜಿ ಪಂದ್ಯಗಳಲ್ಲಿ ಎಂತಹ ಪಿಚ್ ಇರುತ್ತದೆ ಎಂದು ಗೊತ್ತಿಲ್ಲ. ರಣಜಿಯಲ್ಲಿ ಆಟಗಾರನ 50 ಸರಾಸರಿ ಎನ್ನುವುದು ಗೌರವಯುತವಾಗಿದೆ’’ ಎಂದು ಇನ್ನೊಬ್ಬ ಅಭಿಮಾನಿ ಹೇಳಿದ್ದಾನೆ.







