‘ಹಾಲ್ ಆಫ್ ಫೇಮ್’ಗೆ ಪಾಂಟಿಂಗ್ ಅಧಿಕೃತ ಸೇರ್ಪಡೆ

ಮೆಲ್ಬೋರ್ನ್, ಡಿ.26: ಇಲ್ಲಿಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾತ್ ತಮ್ಮ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರಿಗೆ ಸ್ಮರಣಾರ್ಥ ಕ್ಯಾಪ್ ನೀಡಿದರು. ಈ ಮೂಲಕ ಪಾಂಟಿಂಗ್ ಐಸಿಸಿಯ ‘ಹಾಲ್ ಆಫ್ ಫೇಮ್’ಗೆ ಅಧಿಕೃತವಾಗಿ ಸೇರ್ಪಡೆಯಾದರು.
ಕ್ಯಾಪ್ ಸ್ವೀಕರಿಸಿ ಮಾತನಾಡಿದ ಆಸ್ಟ್ರೇಲಿಯದ ಪರ 168 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಪಾಂಟಿಂಗ್, ‘‘ಇದೊಂದು ಅದ್ಭುತ ಕ್ಷಣ. ಈ ಕ್ಷಣ ಎಮ್‌ಸಿಜಿಯಲ್ಲಿ ಸಂಭವಿಸುವುದಾದರೆ ವಿಶೇಷ ಖುಷಿಯಾಗುತ್ತದೆ ಎಂದು ನಾನೆನಿಸಿದ್ದೆ. ನಾನು ಈ ಗೌರವಕ್ಕೆ ಪಾತ್ರವಾಗುತ್ತಿರುವ 25ನೇ ಕ್ರಿಕೆಟಿಗ ಎಂದು ತಿಳಿಯಿತು. ಆಸ್ಟ್ರೇಲಿಯದ ಪರ ಒಂದು ಟೆಸ್ಟ್ ಪಂದ್ಯ ಆಡಿದರೂ ಗಣ್ಯ ಆಟಗಾರರ ಗುಂಪು ಸೇರಿದಂತೆ; ಇನ್ನು ಒಂದು ವೇಳೆ ಐಸಿಸಿ ‘ಹಾಲ್ ಆಫ್ ಫೇಮ್’ಗೆ ಗೌರವಕ್ಕೆ ಪಾತ್ರವಾದರೆ ಅತೀ ಗಣ್ಯ ಕ್ರಿಕೆಟಿಗರ ಗುಂಪು ಸೇರಿದ ಹಾಗೆಯೇ’’ ಎಂದು ಹೇಳಿದರು.
ಪಾಂಟಿಂಗ್, ಆಸ್ಟ್ರೇಲಿಯ 3 ಬಾರಿ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು. ಅದರಲ್ಲಿ 2 ಬಾರಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. 2012ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ 44 ವರ್ಷದ ಪಾಂಟಿಂಗ್, 168 ಟೆಸ್ಟ್ ಗಳಿಂದ 44 ಶತಕಗಳೊಂದಿಗೆ 13,378 ರನ್ ಗಳಿಸಿದ್ದಾರೆ. 375 ಏಕದಿನ ಪಂದ್ಯಗಳಿಂದ 30 ಶತಕಗಳೊಂದಿಗೆ 13,704 ರನ್ ಹಾಗೂ 17 ಟಿ20 ಪಂದ್ಯಗಳಿಂದ 401 ರನ್ ಗಳಿಸಿದ್ದಾರೆ.ಇದರಲ್ಲಿ ಎರಡು ಅರ್ಧಶತಕಗಳೂ ಸೇರಿವೆ.
2006 ಹಾಗೂ 2007ರಲ್ಲಿ ಅವರು ಐಸಿಸಿಯ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.







