ಮಾಡ್ರಿಕ್ ಕ್ರೊಯೇಶಿಯದ ವರ್ಷದ ಕ್ರೀಡಾಪಟು
ಪ್ರಶಸ್ತಿಗಳ ಕಿರೀಟಕ್ಕೆ ಮತ್ತೊಂದು ಗರಿ

ಪ್ಯಾರಿಸ್, ಡಿ.26: ಕ್ರೊಯೇಶಿಯಾ ಫುಟ್ಬಾಲ್ ತಾರೆ ಲುಕಾ ಮಾಡ್ರಿಕ್ ತಮ್ಮ ಪ್ರಶಸ್ತಿಗಳ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರ್ಪಡೆ ಮಾಡಿದ್ದಾರೆ. ಕ್ರೊಯೇಶಿಯಾ 2018ರ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಬುಧವಾರ ಅವರು ತಮ್ಮದಾಗಿಸಿಕೊಂಡಿದ್ದಾರೆ.
5 ಬಾರಿಯ ಯುರೋಪಿಯನ್ ಚಾಂಪಿಯನ್ ಆಗಿ ಸುದ್ದಿಯಲ್ಲಿರುವ ಸ್ಯಾಂಡ್ರಾ ಪೆರ್ಕೊವಿಕ್ ಅವರಿಗೆ ಮಹಿಳಾ ವಿಭಾಗದಲ್ಲಿ ಈ ಪ್ರಶಸ್ತಿ ಸಂದಿದೆ. 2018ರ ವಿಶ್ವಕಪ್‌ನಲ್ಲಿ ರನ್ನರ್‌ಅಪ್ ಆದ ಫುಟ್ಬಾಲ್ ತಂಡಕ್ಕೆ ಕ್ರೊಯೇಶಿಯಾ 2018ರ ವರ್ಷದ ತಂಡ ಎಂದು ಪ್ರಶಸ್ತಿ ನೀಡಲಾಗಿದೆ. ಸುಮಾರು 322 ಪತ್ರಕರ್ತರು ಈ ಪ್ರಶಸ್ತಿ ನಾಮಕರಣಕ್ಕೆ ಮತ ಹಾಕಿದ್ದರು.
ಈ ವರ್ಷದ ಮೇ ತಿಂಗಳಲ್ಲಿ ನಡೆದ ಚಾಂಪಿಯನ್ಸ್ ಲೀಗ್‌ನಲ್ಲಿ ಕ್ರೊಯೇಶಿಯಾ ತಂಡವನ್ನು ಚಾಂಪಿಯನ್ ಪಟ್ಟದವರೆಗೆ ಮುನ್ನಡೆಸಿದ್ದ ಲುಕಾ, ಜುಲೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದವರೆಗೂ ಒಯ್ದಿದ್ದರು.
ಮಿಡ್‌ಫೀಲ್ಡರ್ ಮಾಡ್ರಿಕ್, ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟಗಾರನಿಗೆ ಸಲ್ಲುವ ಚಿನ್ನದ ಚೆಂಡು, ಸೆಪ್ಟಂಬರ್‌ನಲ್ಲಿ ಫಿಫಾದಿಂದ ಅತ್ಯುತ್ತಮ ಪುರುಷ ಆಟಗಾರ ಪ್ರಶಸ್ತಿ ಹಾಗೂ ಡಿಸೆಂಬರ್‌ನಲ್ಲಿ ವಿಶ್ವದ ಅತ್ಯುತ್ತಮ ಆಟಗಾರನಿಗೆ ಸಲ್ಲುವ ಪ್ರತಿಷ್ಠಿತ ಬ್ಯಾಲನ್ ಡಿ’ ಓರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆಲ್ಲುವ ಮೂಲಕ ಅವರು, ಈ ಪ್ರಶಸ್ತಿಯ ಮೇಲೆ ದಶಕದ ಕಾಲ ಅಧಿಪತ್ಯ ಸಾಧಿಸಿದ್ದ ಮೆಸ್ಸಿ ಹಾಗೂ ರೊನಾಲ್ಡೊ ಅವರನ್ನು ಹಿಂದಕ್ಕೆ ತಳ್ಳಿದ್ದರು.







