ಪ್ರೊ ಕಬಡ್ಡಿ: ಚಾಂಪಿಯನ್ ಪಾಟ್ನಾಗೆ ಸೋಲುಣಿಸಿದ ಗುಜರಾತ್

ಕೋಲ್ಕತಾ, ಡಿ.26: ಉತ್ತಮ ಪೈಪೋಟಿ ಕಂಡು ಬಂದ ಗುಜರಾತ್ ಫಾರ್ಚುನ್‌ಜೆಂಟ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಮಧ್ಯದ ಪಂದ್ಯದಲ್ಲಿ ಅಂತಿಮವಾಗಿ ಫಾರ್ಚುನ್‌ಜೆಂಟ್ಸ್ 37-29 ಅಂಕಗಳ ಅಂತರದಿಂದ ಜಯ ಸಾಧಿಸಿತು.
ಇಲ್ಲಿಯ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಅಂತರ್‌ವಲಯ ವೈಲ್ಡ್‌ಕಾರ್ಡ್ ಪಂದ್ಯದಲ್ಲಿ ಬುಧವಾರ ಸೋಲು ಕಂಡ ಹಾಲಿ ಚಾಂಪಿಯನ್ ಪಾಟ್ನಾ ತಂಡ ಎಲಿಮಿನೇಷನ್ ಅಂಚಿಗೆತಲುಪಿದೆೆ. ವಿಜೇತ ಗುಜರಾತ್ ಪರ ರೋಹಿತ್ ಗುಲಿಯ ಅತ್ಯಧಿಕ 9 ಅಂಕ ಗಳಿಸಿದರೆ, ಅಜಯ್‌ಕುಮಾರ್ 8, ಲಲಿತ್ ಚೌಧರಿ ಹಾಗೂ ನಾಯಕ ಸುನೀಲ್‌ಕುಮಾರ್ ತಲಾ 5 ಅಂಕ ಗಳಿಸಿದರು. ಪರಾಜಿತ ಪಾಟ್ನಾ ಪೈರೇಟ್ಸ್ ಪರ ಪರ್ದೀಪ್ ನರ್ವಾಲ್ ಅತ್ಯಧಿಕ 10, ವಿಕಾಸ್ ಜಗ್ಲಾನ್ ಹಾಗೂ ತುಷಾರ್ ಪಾಟೀಲ್ ತಲಾ 5 ಅಂಕ ಗಳಿಸಿದರು.
ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಬೆಂಗಳೂರು ಬುಲ್ಸ್‌ನ್ನು 37-31 ಅಂಕಗಳ ಅಂತರದಿಂದ ಮಣಿಸಿತು. ವಿಜೇತ ವಾರಿಯರ್ಸ್ ಪರ ಮಣಿಂದರ್ ಸಿಂಗ್ ಅತ್ಯಧಿಕ 16 ಅಂಕ ಗಳಿಸಿ ಮಿಂಚಿದರೆ, ಲೀ ಜಾಂಗ್ ಕುನ್ 7 ಅಂಕ ಗಳಿಸಿದರು. ಸೋಲು ಕಂಡ ಬೆಂಗಳೂರು ಪರ ಪವನ್‌ಕುಮಾರ್ 10 ಹಾಗೂ ರೋಹಿತ್‌ಕುಮಾರ್ 6 ಅಂಕ ಗಳಿಸಿದರು.





