ಲಕ್ಮಲ್ ಸ್ಪಿನ್‌ಗೆ ಕಿವೀಸ್ ಕಂಗಾಲು
ಸೌಥಿ ಆಲ್‌ರೌಂಡ್ ಆಟ

ಕ್ರೈಸ್ಟ್‌ಚರ್ಚ್, ಡಿ.26: ಮಧ್ಯಮ ವೇಗಿ ಸುರಂಗ ಲಕ್ಮಲ್ ಅವರ ಜೀವನಶ್ರೇಷ್ಠ ಐದು ವಿಕೆಟ್ ಗೊಂಚಲು ನೆರವಿನಿಂದ ನ್ಯೂಝಿಲೆಂಡ್‌ನ್ನು ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 178 ರನ್‌ಗಳಿಗೆ ನಿಯಂತ್ರಿಸಿದೆ. ಆದರೆ ನ್ಯೂಝಿಲೆಂಡ್ ಕೂಡ ತಿರುಗೇಟು ನೀಡಿದ್ದು, 88 ರನ್‌ಗೆ ಶ್ರೀಲಂಕಾದ ನಾಲ್ಕು ವಿಕೆಟ್ ಉರುಳಿಸಿದೆ.
ಬುಧವಾರ ಇಲ್ಲಿಯ ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ಸುರಂಗ ಲಕ್ಮಲ್(54ಕ್ಕೆ 5) ಅವರ ಬೌಲಿಂಗ್ ವೇಗಕ್ಕೆ ಉತ್ತರಿಸಲಾಗದ ಕಿವೀಸ್ ದಾಂಡಿಗರು ಪಟಪಟನೇ ವಿಕೆಟ್ ಕೈಚೆಲ್ಲಿದರು. ಒಂದು ಹಂತದಲ್ಲಿ 64 ರನ್‌ಗೆ ಆರು ವಿಕೆಟ್ ಕಳೆದುಕೊಂಡಿದ್ದ ಕಿವೀಸ್‌ಗೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ವಾಟ್ಲಿಂಗ್(46) ಹಾಗೂ ಬಿರುಸಿನ ಅರ್ಧಶತಕ ಸಿಡಿಸಿದ ಆಲ್‌ರೌಂಡರ್ ಟಿಮ್ ಸೌಥಿ(68) ಜೀವ ತುಂಬಿದರು. 7ನೇ ವಿಕೆಟ್‌ಗೆ ಇವರಿಬ್ಬರೂ ಸೇರಿ 108 ರನ್ ಜಮೆ ಮಾಡಿದರು. ಅಂತಿಮವಾಗಿ ನ್ಯೂಝಿಲೆಂಡ್ 178 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಶ್ರೀಲಂಕಾ ಪರ ಲಹಿರು ಕುಮಾರ 3 ವಿಕೆಟ್ ಪಡೆದು ಲಕ್ಮಲ್‌ಗೆ ಸಾಥ್ ನೀಡಿದರು.
ಕಿವೀಸ್‌ನ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಲಂಕಾ ಕೂಡ ಅಷ್ಟೇನೂ ಉತ್ತಮ ಪ್ರದರ್ಶನ ತೋರಲಿಲ್ಲ. ಬ್ಯಾಟಿಂಗ್‌ನಲ್ಲಿ ಪ್ರತಾಪ ತೋರಿದ್ದ ಸೌಥಿ ಬೌಲಿಂಗ್‌ನಲ್ಲ್ಲೂ ಮಿಂಚು ಹರಿಸಿದರು. ಪ್ರವಾಸಿ ತಂಡದ 3 ವಿಕೆಟ್‌ಗಳನ್ನು ಈಗಾಗಲೇ ಸೌಥಿ ಉರುಳಿಸಿದ್ದು, ಶ್ರೀಲಂಕಾ 4 ವಿಕೆಟ್ ಕಳೆದುಕೊಂಡು 88 ರನ್ ಗಳಿಸಿದೆ. ಮ್ಯಾಥ್ಯೂಸ್ (27) ಹಾಗೂ ರೋಶನ್ ಸಿಲ್ವಾ(15) ಕ್ರೀಸ್‌ನಲ್ಲಿದ್ದಾರೆ.





