ಭಾರತದ ನೂತನ ಬಾಕ್ಸಿಂಗ್ ಕೋಚ್ ಕುಟ್ಟಪ್ಪ

ಹೊಸದಿಲ್ಲಿ, ಡಿ.26: ದ್ರೋಣಾಚಾರ್ಯ ಪ್ರಶಸ್ತಿ ಪುರಸ್ತೃತ ಮೈಸೂರು ಮೂಲದ ಸಿ.ಎ.ಕುಟ್ಟಪ್ಪ ಭಾರತದ ಬಾಕ್ಸಿಂಗ್‌ನ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಈಗ ನಡೆಯುತ್ತಿರುವ ರಾಷ್ಟ್ರೀಯ ಬಾಕ್ಸಿಂಗ್ ಶಿಬಿರದಲ್ಲಿ ಅವರು ನೂತನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವಿಜೇಂದರ್ ಸಿಂಗ್, ಎಂ.ಸುರಂಜಯ್, ಶಿವ ಥಾಪಾ ಸೇರಿದಂತೆ ದೇಶದ ಹಲವು ಯಶಸ್ವಿ ಬಾಕ್ಸರ್‌ಗಳಿಗೆ ಕೋಚಿಂಗ್ ನೀಡಿದ ಹಿರಿಮೆ 39 ವರ್ಷದ ಕುಟ್ಟಪ್ಪ ಅವರದು. ಡಿ.10ರಿಂದ ರಾಷ್ಟ್ರೀಯ ಶಿಬಿರ ಚಾಲನೆಯಲ್ಲಿದ್ದು, ತಂಡದ ಕೋಚ್ ಆಗಿದ್ದ ಎಸ್.ಆರ್.ಸಿಂಗ್ ಅವರ ಸ್ಥಾನವನ್ನು ಕುಟ್ಟಪ್ಪ ತುಂಬಲಿದ್ದಾರೆ.
‘‘ಇದೊಂದು ಬಹುದೊಡ್ಡ ಜವಾಬ್ದಾರಿ. ಆದರೆ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಲಿದ್ದೇನೆ. ಕೆಲವೊಂದು ಯೋಜನೆಗಳನ್ನು ನಾನು ಹಾಕಿಕೊಂಡಿದ್ದು, ಅವುಗಳನ್ನು ಸಮರ್ಥವಾಗಿ ಬಳಸುವ ವಿಶ್ವಾಸದಲ್ಲಿದ್ದೇನೆ’’ ಎಂದು ಈ ಹಿಂದೆ ತಂಡದ ಸಹಾಯಕ ಕೋಚ್ ಆಗಿದ್ದ ಕುಟ್ಟಪ್ಪ ಹೇಳಿದರು. ಗುವಾಹಟಿಯಲ್ಲಿ ಜನವರಿಯಲ್ಲಿ ಆರಂಭವಾಗುವ ಎರಡನೇ ಆವೃತ್ತಿಯ ಇಂಡಿಯಾ ಓಪನ್‌ಗೆ ಬಾಕ್ಸರ್‌ಗಳನ್ನು ತರಬೇತಿಗೊಳಿಸುವ ಮೊದಲ ಜವಾಬ್ದಾರಿ ಕುಟ್ಟಪ್ಪ ಅವರ ಮೇಲಿದೆ.





