ಕೇಂದ್ರದ ಬ್ಯಾಂಕ್ ವಿಲೀನ ನಿರ್ಧಾರಕ್ಕೆ ವಿರೋಧ: ದಾವಣಗೆರೆಯಲ್ಲಿ ಬ್ಯಾಂಕ್ ನೌಕರರಿಂದ ಪ್ರತಿಭಟನೆ

ದಾವಣಗೆರೆ,ಡಿ.26: ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನೀಕರಿಸುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ವಿರೋಧಿಸಿ ದಾವಣಗೆರೆ ಪಿಬಿ ರಸ್ತೆ ವಿಜಯಾ ಬ್ಯಾಂಕ್ ಮುಖ್ಯ ಶಾಖೆ ಮುಂಭಾಗದಲ್ಲಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಮುಖಂಡ ಕೆ. ರಾಘವೇಂದ್ರ ನಾಯರಿ, ಕೇಂದ್ರ ಸರ್ಕಾರದ ವಿಲೀನೀಕರಣ ನೀತಿಯು ಅತ್ಯಂತ ಅವೈಜ್ಞಾನಿಕ ಮತ್ತು ಅಸಮರ್ಥನೀಯವಾಗಿದೆ. "ದೊಡ್ಡ ಬ್ಯಾಂಕ್ - ದೊಡ್ಡ ಅಪಾಯ" ಎನ್ನುವಂತೆ ಬ್ಯಾಂಕ್ ವಿಲೀನೀಕರಣದಿಂದ ಯಾವುದೇ ರೀತಿಯ ಅನುಕೂಲತೆಗಳು ಆಗುವ ಸಾಧ್ಯತೆಗಳಿಲ್ಲ. ನಮ್ಮ ದೇಶಕ್ಕೆ ದೊಡ್ಡ ಬ್ಯಾಂಕುಗಳ ಅಗತ್ಯಕ್ಕಿಂತ ಭದ್ರವಾದ ಬುನಾದಿ ಹೊಂದಿರುವ ಮತ್ತು ಜನಸಾಮಾನ್ಯನ ಅಗತ್ಯಕ್ಕೆ ಸ್ಪಂದಿಸುವ ಸೇವಾ ಮನೋಭಾವನೆಯುಳ್ಳ ಬ್ಯಾಂಕುಗಳ ಅಗತ್ಯವಿದೆ ಎನ್ನುವುದನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ ಎಂದರು.
ಈ ವಿಲೀನೀಕರಣ ಧೋರಣೆ ಸಂಪೂರ್ಣ ಕಾರ್ಮಿಕ ವಿರೋಧಿಯಾಗಿದ್ದು, ವಿಲೀನೀಕರಣದ ನಂತರದ ದಿನಗಳಲ್ಲಿ ಸರ್ಕಾರವು ಬ್ಯಾಂಕ್ ಶಾಖೆಗಳ ಮುಚ್ಚುವಿಕೆ, ಸಿಬ್ಬಂದಿ ಸ್ವಯಂ ನಿವೃತ್ತಿಗೊಳಿಸುವಿಕೆ, ಸಿಬ್ಬಂದಿಗಳ ನೇಮಕಾತಿಯಲ್ಲಿ ಕಡಿತ ಮತ್ತು ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆ ದುರ್ಬಲಗೊಳಿಸುವ ಅಪಾಯವಿದೆ. ಇದು ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ದುರ್ಬಲಗೊಳಿಸುವ ಹುನ್ನಾರ ಮತ್ತು ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಿಗೆ ಅನಗತ್ಯವಾದ ಸಹಕಾರ ನೀಡುವ ದುರಾಲೋಚನೆಯಾಗಿದೆ ಎಂದರು.
ಪ್ರಸ್ತುತ ಭಾರತದ ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತು ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಬೇಕಾಗಿರುವುದು ಬ್ಯಾಂಕುಗಳ ವಿಲೀನವಲ್ಲ. ಬ್ಯಾಂಕುಗಳ ವಿಸ್ತಾರ ಈಗಿನ ಅತ್ಯಗತ್ಯ ಅವಶ್ಯಕತೆ. ಅನೇಕ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಬ್ಯಾಂಕುಗಳ ವಿಸ್ತರಣೆ ಇನ್ನೂ ಪರಿಣಾಮಕಾರಿಯಾಗಿ ಆಗಿಲ್ಲ. ಸರ್ಕಾರಿ ಬ್ಯಾಂಕುಗಳ ವಿಸ್ತರಣೆ ಮತ್ತು ಅಗತ್ಯ ಸಿಬ್ಬಂದಿ ನೇಮಕಾತಿ ಈಗಿನ ತುರ್ತು ಅಗತ್ಯವೇ ಹೊರತು ಬ್ಯಾಂಕುಗಳ ವಿಲೀನವಲ್ಲ. ಜೊತೆಗೆ ಖಾಸಗಿ ಬಂಡವಾಳಶಾಹಿಗಳ ಸುಸ್ತಿ ಸಾಲ ವಸೂಲಾತಿ ಮಾಡುವ ನಿಟ್ಟಿನಲ್ಲಿ ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಉದ್ದೇಶಿತ ಸುಸ್ತಿದಾರರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಿ ಅವರ ಆಸ್ತಿಗಳನ್ನು ಜಪ್ತಿ ಮಾಡಬೇಕು. ಸುಸ್ತಿದಾರರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟ ಮಾಡಬೇಕು. ಇದು ನಮ್ಮ ಬೇಡಿಕೆ ಮತ್ತು ಇಂದಿನ ಅಗತ್ಯವಾಗಿದೆ ಎಂದರು.
ಹಾಗಾಗಿ, ಬ್ಯಾಂಕುಗಳ ಮುಚ್ಚುವಿಕೆ, ಶಾಖೆಗಳ ಮುಚ್ಚುವಿಕೆ, ಸಿಬ್ಬಂದಿಗಳ ನೇಮಕಾತಿಯಲ್ಲಿ ಕುಂಠಿತ, ಉದ್ಯೋಗದ ಅಭದ್ರತೆ ಮುಂತಾದ ಹಲವಾರು ಅಪಾಯಗಳಿಗೆ ಕಾರಣವಾಗಿರುವ ಬ್ಯಾಂಕ್ ವಿಲೀನೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತತ್‍ಕ್ಷಣವೇ ನಿಲ್ಲಿಸಬೇಕು. ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‍ಗಳ ವಿಲೀನದ ನಿರ್ಧಾರ ಹಿಂಪಡೆಯಬೇಕು ಹಾಗೂ ಬ್ಯಾಂಕುಗಳ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಿರುವ ಸುಸ್ತಿ ಸಾಲವನ್ನು ವಸೂಲಾತಿ ಮಾಡಲು ಕಠಿಣಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತ ಬ್ಯಾಂಕ್ ಉದ್ಯೋಗಿಗಳು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ.ಎನ್. ಗಿರಿರಾಜ್, ಹರೀಶ್ ಎಂ. ಪೂಜಾರ್, ಎಸ್. ಪ್ರಶಾಂತ್, ಆನಂದಮೂರ್ತಿ, ಜಿ.ರಂಗಸ್ವಾಮಿ, ಪುರುಷೋತ್ತಮ ಪಿ.ಆರ್, ವಾಗೀಶ್ ಎಂ.ಎಸ್., ವಿ. ಶಂಭುಲಿಂಗಪ್ಪ, ಕೆ.ಎನ್. ಗಿರಿರಾಜ್, ಹರೀಶ್ ಎಂ.ಪೂಜಾರ್, ಎಸ್. ಪ್ರಶಾಂತ್, ಕೆ. ವಿಶ್ವನಾಥ್ ಬಿಲ್ಲವ, ವಿಜಯಾ ಬ್ಯಾಂಕ್ ಆನಂದಮೂರ್ತಿ, ತಿಪ್ಪೇಸ್ವಾಮಿ ಹೆಚ್.ಎಸ್., ಜಿ.ರಂಗಸ್ವಾಮಿ ಮತ್ತಿತರರಿದ್ದರು.







