ಗುಜರಾತ್ ಗಲಭೆ ವೇಳೆ ಗೃಹಸಚಿವರಾಗಿದ್ದ ಗೋರ್ಧನ್ ಝಡಾಪಿಯಾ ಉತ್ತರ ಪ್ರದೇಶ ಬಿಜೆಪಿಯ ಉಸ್ತುವಾರಿ

ಹೊಸದಿಲ್ಲಿ, ಡಿ. 27: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದುತ್ವ ಕೇಂದ್ರಿತ ಪ್ರಚಾರಕ್ಕೆ ಬಿಜೆಪಿ ಒತ್ತು ನೀಡುವುದು ಸ್ಪಷ್ಟವಾಗಿದೆ. 2002ರ ಗುಜರಾತ್ ಹತ್ಯಾಕಾಂಡದ ವೇಳೆ ಗುಜರಾತ್ ನ ಗೃಹಸಚಿವರಾಗಿದ್ದ ಗೋರ್ಧನ್ ಝಡೋಪಿಯಾ ಅವರನ್ನು ಉತ್ತರ ಪ್ರದೇಶದ ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
ಪಕ್ಷದ ಉಪಾಧ್ಯಕ್ಷ ದುಶ್ಯಂತ್ ಗೌತಮ್ ಮತ್ತು ಮಧ್ಯಪ್ರದೇಶದ ಮುಖಂಡ ನರೋತ್ತಮ್ ಮಿಶ್ರಾ ಕೂಡಾ ಉತ್ತರ ಪ್ರದೇಶಕ್ಕೆ ನಿಯೋಜಿತರಾಗಿರುವವರ ಪಟ್ಟಿಯಲ್ಲಿ ಸೇರಿದ್ದಾರೆ. ಒಟ್ಟು 17 ರಾಜ್ಯಗಳ ಚುನಾವಣಾ ಉಸ್ತುವಾರಿಗಳನ್ನು ಬುಧವಾರ ನೇಮಿಸಲಾಗಿದೆ.
ಝಡೋಪಿಯಾ ಅವರನ್ನು ನೇಮಕ ಮಾಡಿರುವ ಬಿಜೆಪಿ ಕ್ರಮವನ್ನು ರಾಮಮಂದಿರ ಮತ್ತು ಇತರ ಹಿಂದುತ್ವ ವಿಚಾರಗಳಿಗೆ ಬಿಜೆಪಿ ಒತ್ತು ನೀಡುವುದರ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ. ಮೋದಿ ಸಿಎಂ ಆಗಿದ್ದ ಅವಧಿಯಲ್ಲಿ ಅವರ ವಿರುದ್ಧವೇ ತಿರುಗಿಬಿದ್ದಿದ್ದ ಝಡೋಪಿಯಾ ಹಿಂದುತ್ವದ ಪ್ರಬಲ ಶಕ್ತಿ ಎಂದೇ ಗುರುತಿಸಲ್ಪಟ್ಟಿದ್ದಾರೆ. ಮೋದಿ ವಿರುದ್ಧ ಬಂಡಾಯವೆದ್ದು, ಮಹಾ ಗುಜರಾತ್ ಜನತಾ ಪಕ್ಷವನ್ನು 2009ರ ಲೋಕಸಭಾ ಚುನಾವಣೆ ವೇಳೆ ಸ್ಥಾಪಿಸಿದ್ದರು. ಬಿಜೆಪಿಯ ರಾಜೇಂದ್ರ ಸಿಂಗ್ ರಾಣಾ ವಿರುದ್ಧ ಕೇವಲ 6000 ಮತಗಳ ಸೋಲು ಅನುಭವಿಸಿದ್ದರು.
ಬಳಿಕ ಪಾಟಿದಾರರನ್ನು ಸಂಘಟಿಸುವ ಸಲುವಾಗಿ ಸರ್ದಾರ್ ಪಟೇಲ್ ಉತ್ಕರ್ಷ ಸಮಿತಿ ಹುಟ್ಟುಹಾಕಿದ್ದರು. 2014ರ ಲೋಕಸಭಾ ಚುನಾವಣೆಗೆ ಮೋದಿಯನ್ನು ಪಿಎಂ ಅಭ್ಯರ್ಥಿ ಎಂದು ಬಿಂಬಿಸಿದ ಬಳಿಕ ಪಕ್ಷಕ್ಕೆ ಮರಳಿದ್ದರು. ರಾಜಕೀಯವಾಗಿ ತೀರಾ ಮಹತ್ವದ ಈ ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಭರ್ಜರಿ ಯಶಸ್ಸಿಗೆ ಕಾರಣರಾಗಿದ್ದ ಅಮಿತ್ ಶಾ ಅವರೇ ಛಾಯಾ ಉಸ್ತುವಾರಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ರಾಜಸ್ತಾನದ ಉಸ್ತುವಾರಿಯಾಗಿ ಮುಂದುವರಿಯಲಿದ್ದು, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಸಹಕರಿಸಲಿದ್ದಾರೆ. ಬಿಜೆಪಿ ಆಡಳಿತದ ಉತ್ತರಾಖಂಡಕ್ಕೆ ಥಾವರ್ಚಂದ್ ಗೆಹ್ಲೋಟ್ ಉಸ್ತುವಾರಿ ಹೊಣೆ ಪಡೆದಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಬಿಹಾರ ಹಾಗೂ ಅನಿಲ್ ಜೈನ್ ಅವರು ಛತ್ತೀಸ್ಗಢದ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.