ಮೋದಿ ಸರಕಾರದ ಕಾರ್ಮಿಕರ ದಮನಕಾರಿ ನೀತಿ ವಿರುದ್ಧ ಹೋರಾಟ ಅನಿವಾರ್ಯ: ವಸಂತ ಆಚಾರಿ

ಮಂಗಳೂರು, ಡಿ. 27: ದೇಶದ ಜನರಿಗೆ ಅಚ್ಚೇ ದಿನ್ ಕೊಡುತ್ತೇವೆ ಎಂದು ಭ್ರಮೆಯನ್ನು ಸೃಷ್ಟಿಸಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಜನರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಮಾತ್ರವಲ್ಲ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿ ಕಾರ್ಮಿಕರ ಹಕ್ಕುಗಳನ್ನು ಸರಕಾರ ಕಸಿದಕೊಂಡು ಕಾರ್ಪೋರೇಟ್ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಅಪಾದಿಸಿದರು.
ಇಂದು ಅವರು ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಜ.8, 9ರಂದು ನಡೆಯಲಿರುವ ಅಖಿಲ ಭಾರತ ಕಾರ್ಮಿಕರ ಮುಷ್ಕರದ ಸಿದ್ಧತೆಗಾಗಿ ಜರಗಿದ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಪ್ಪುಹಣ ವಾಪಾಸ್ ತರುತ್ತೇನೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ವಂಚಿಸಲಾಯಿತು. ನೋಟು ಅಮಾನ್ಯೀಕರಣ ವಿಫಲವಾಗಿದೆ ರಫೆಲ್ ಹಗರಣದಲ್ಲಿ ಸುಪ್ರೀಂಕೋರ್ಟಿನ ದಿಕ್ಕು ತಪ್ಪಿಸಿ ಸರಕಾರ ಭ್ರಷ್ಟಾಚಾರ ಮಾಡಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಬದಲಿಗೆ ಯುವಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಮೋದಿ ಸರಕಾರ ವಿಫಲವಾಗಿದೆ ಎಂದರು. ಮೋದಿ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಜ.8, 9ರಂದು ಇಡೀ ದೇಶದ ಎಲ್ಲ ವಿಭಾಗದ ದುಡಿಯುವ ವರ್ಗದ ಜನರು ಕೇಂದ್ರ ಸರಕಾರದ ವಿರುದ್ಧ ಚಾರಿತ್ರಿಕ ಮುಷ್ಕರ ನಡೆಸಲಿ ದ್ದಾರೆ ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್, ಉಪಾಧ್ಯಕ್ಷ ಹಸನ್ ಮೋನು, ಮುಖಂಡರಾದ ಮಾಧವ ಕಾವೂರು, ಹಂಝ, ಬಶೀರ್, ಸಿದ್ದೀಕ್ ಬೆಂಗರೆ, ಮಜೀದ್ ಕೊಂಚಾಡಿ, ಶರೀಫ್ ಕುಪ್ಪೆಪದವು ಉಪಸ್ಥಿತರಿದ್ದರು.
ಸಂಘದ ಸಹ ಕಾರ್ಯದರ್ಶಿ ಚಂದ್ರಹಾಸ್ ಕುತ್ತಾರ್ ಸ್ವಾಗತಿಸಿದರು. ಕೋಶಾಧಿಕಾರಿ ಹರೀಶ್ ಕೆರೆಬೈಲ್ ವಂದಿಸಿದರು.







