ದ.ಕ.: ಉಜ್ವಲ ಯೋಜನೆಯಡಿ 18169 ಉಚಿತ ಅಡುಗೆ ಅನಿಲ ಸಂಪರ್ಕ

ಮಂಗಳೂರು, ಡಿ.27: ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 18169 ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನೋಡ್ ಅಧಿಕಾರಿ ಎಚ್.ಸಿ. ಕೃಷ್ಣ ತಿಳಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ 2017ರ ಜೂನ್‌ನಲ್ಲಿ ಈ ಯೋಜನೆ ಆರಂಭಗೊಂಡಿದ್ದು, ಇದೀಗ 2018ರ ಮೇ ನಂತರ ಯೋಜನೆಯ ಮುಂದುವರಿದ ಭಾಗವಾಗಿ ದ್ವಿತೀಯ ಹಂತದ ಕಾರ್ಯಕ್ರಮ ಆರಂಭವಾಗಿದೆ ಎಂದರು.
ಯೋಜನೆಯಡಿ ಈವರೆಗೆ ಸೌಲಭ್ಯದಿಂದ ಹೊರಗುಳಿದಿರುವ ಬಡ ಬಿಪಿಎಲ್ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕವನ್ನು ಒದಗಿಸಲಾಗುತ್ತಿದ್ದು, ಸರಕಾರದ 14 ಅಂಶಗಳ ಮಾನದಂಡಗಳಿಗೆ ಒಳಪಡುವ ಅರ್ಹ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಎಸ್‌ಸಿಎಸ್‌ಟಿ, ಅಂತ್ಯೋದಯ, ಪ್ರಧಾನ ಮಂತ್ರಿ ವಾಝ್ ಯೋಜನೆ, ಬುಡಕಟ್ಟು ಜನಾಂಗದವರು, ದ್ವೀಪ ಪ್ರದೇಶಗಳಲ್ಲಿ ವಾಸಿಸುವವರಿಗೆ ದ್ವಿತೀಯ ಹಂತದ ಉಚಿತ ಅಡುಗೆ ಅನಿಲ ವಿತರಣೆ ಸೌಲಭ್ಯದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ 2016ರಲ್ಲಿ ಅಂಕಿ ಅಂಶಗಳ ಪ್ರಕಾರ ಶೇ. 86.34 ಕುಟುಂಬಗಳು ಅಡುಗೆ ಅನಿಲ ಸಂಪರ್ಕವನ್ನು ಹೊಂದಿದ್ದವು. ಇದೀಗ 2018ರ ಡಿಸೆಂಬರ್ 1ರ ವೇಳೆಗೆ ಅಡುಗೆ ಅನಿಲ ಸಂಪರ್ಕ ಹೊಂದಿರುವರ ಸಂಖ್ಯೆ ಶೇ. 97.14ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಎಚ್‌ಪಿಸಿಎಲ್ ಸಂಸ್ಥೆಯ ಮುಖ್ಯ ಪ್ರಾದೇಶಿಕ ವ್ಯವಸ್ಥಾಪ ಎನ್. ರಮೇಶ್ ಉಪಸ್ಥಿತರಿದ್ದರು.