ನಿಮ್ಮ ಪಾದಗಳು ಮರಗಟ್ಟುತ್ತಿವೆಯೇ?: ಹಾಗಾದರೆ ಅದರ ಕಾರಣಗಳನ್ನು ತಿಳಿದುಕೊಳ್ಳಿ
ನೀವು ದಿನವಿಡೀ ಕುಳಿತುಕೊಂಡು ಕೆಲಸ ಮಾಡುವವರಾಗಿದ್ದರೆ ಪಾದಗಳು ಮರಗಟ್ಟುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಸುದೀರ್ಘ ಸಮಯ ಒಂದೇ ಭಂಗಿಯಲ್ಲಿದ್ದರೆ ನರಗಳ ಮೇಲೆ ಒತ್ತಡವುಂಟಾಗಿ ಮರಗಟ್ಟುವುದಕ್ಕೆ ಕಾರಣವಾಗುತ್ತದೆ ಮತ್ತು ಕೆಲವು ಪ್ರಕರಣಗಳಲ್ಲಿ ನೋವನ್ನೂ ಉಂಟು ಮಾಡಬಹುದು. ಆದರೆ ಸಾಮಾನ್ಯವಾಗಿ ಭಂಗಿಯನ್ನು ಬದಲಿಸುವುದರೊಂದಿಗೆ ಇದು ನಿವಾರಣೆಯಾಗುತ್ತದೆ.
ಪಾದಗಳು ಜುಮುಗುಡುವುದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಇದು ಚಿಂತಿಸಬೇಕಾದ ವಿಷಯವೇನಲ್ಲ. ಅದು ಬಿಟ್ಟು ಬಿಟ್ಟು ಕೂಡ ಅನುಭವವಾಗಬಹುದು. ಆದರೆ ಈ ಜುಮುಗುಡುವಿಕೆ ಸುದೀರ್ಘ ಸಮಯ ಮುಂದುವರಿದರೆ ಅಥವಾ ಅದರೊಂದಿಗೆ ನೋವು ಮತ್ತು ಊತವಿದ್ದರೆ ಅದಕ್ಕೆ ಕಾರಣವನ್ನು ತಿಳಿದುಕೊಳ್ಳಲು ಮತ್ತು ಸೂಕ್ತ ಚಿಕಿತ್ಸೆ ಪಡೆಯಲು ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ‘ಪಿನ್ಸ್ ಆ್ಯಂಡ್ ನೀಡಲ್ಸ್’ ಎಂದೂ ಕರೆಯಲಾಗುವ ಈ ಜುಮುಗುಡುವಿಕೆಗೆ ಕೆಲವು ಸಾಮಾನ್ಯ ಕಾರಣಗಳಿಲ್ಲಿವೆ.
►ಡಯಾಬಿಟಿಕ್ ನ್ಯೂರೊಪಥಿ
ಡಯಾಬಿಟಿಕ್ ನ್ಯೂರೊಪಥಿ ಅಥವಾ ಮಧುಮೇಹ ನರರೋಗವು ಮಧುಮೇಹದಿಂದ ಉಂಟಾಗುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲೊಂದಾಗಿದೆ. ಇದು ರಕ್ತದಲ್ಲಿಯ ಸಕ್ಕರೆ ಮಟ್ಟವು ಅಧಿಕಗೊಂಡು ನರಗಳಿಗೆ ಹಾನಿಯುಂಟಾಗಿರುವ ಸ್ಥಿತಿಯಾಗಿರುತ್ತದೆ. ಪಾದಗಳು ಆಗಾಗ್ಗೆ ಜುಮುಗುಡುತ್ತಿರುವುದು ಡಯಾಬಿಟಿಕ್ ನ್ಯೂರೊಪಥಿಯ ಸಾಮಾನ್ಯ ಲಕ್ಷಣವಾಗಿದೆ.
►ಗರ್ಭಾವಸ್ಥೆ
ಕೆಲವು ಗರ್ಭಿಣಿಯರಿಗೆ ಪಾದಗಳಲ್ಲಿ ಜುಮುಗುಡುವಿಕೆಯ ಅನುಭವವಾಗಬಹುದು.ಗರ್ಭಾಶಯವು ದೊಡ್ಡದಾದಂತೆ ಕಾಲುಗಳಿಗೆ ಸಾಗುವ ನರಗಳ ಮೇಲೆ ಒತ್ತಡವುಂಟಾಗುತ್ತದೆ ಮತ್ತು ಇದು ಕಾಲು ಹಾಗೂ ಪಾದಗಳಲ್ಲಿ ಜುಮುಗುಡುವಿಕೆಗೆ ಕಾರಣವಾಗುತ್ತದೆ. ಪಾದಗಳಿಗೆ ವಿಶ್ರಾಂತಿ ನೀಡುವ,ಕುಳಿತ ಭಂಗಿಯನ್ನು ಬದಲಿಸುವ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಆಗಾಗ್ಗೆ ಸಾಕಷ್ಟು ನೀರು ಕುಡಿಯುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಜುಮುಗುಡುವಿಕೆಯು ತೀವ್ರಗೊಂಡರೆ ಮತ್ತು ನಿಶ್ಶಕ್ತಿ ಅಥವಾ ಊತ ಕಾಣಿಸಿಕೊಂಡರೆ ಇತರ ಯಾವುದೇ ಆರೋಗ್ಯ ಸಮಸ್ಯೆಯಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.
►ವಿಟಾಮಿನ್‌ಗಳ ಕೊರತೆ
ವಿಟಾಮಿನ್‌ಗಳ ಕೊರತೆಯು ಪಾದಗಳನ್ನು ಜುಂ ಎನ್ನಿಸಬಹುದು. ಅಗತ್ಯ ಪೌಷ್ಟಿಕಾಂಶಗಳಿಲ್ಲದ ಆಹಾರ ಸೇವನೆ ಅಥವಾ ಯಾವುದಾದರೂ ಆರೋಗ್ಯ ಸಮಸ್ಯೆ ವಿಟಾಮಿನ್‌ಗಳ ಕೊರತೆಯನ್ನುಂಟು ಮಾಡುತ್ತದೆ. ಬಿ-ಕಾಂಪ್ಲೆಕ್ಸ್ ವಿಟಾಮಿನ್‌ಗಳ ಕೊರತೆಯು ಜುಮುಗುಡುವಿಕೆಗೆ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಬಳಲಿಕೆ,ಉಸಿರಾಟದ ತೊಂದರೆ,ತಲೆ ಸುತ್ತುವಿಕೆ,ತಲೆನೋವು,ಕೈಗಳು ಮತ್ತು ಪಾದಗಳು ತಣ್ಣಗಾಗುವುದು ಇತ್ಯಾದಿಗಳು ಬಿ 12 ವಿಟಾಮಿನ್‌ನ ಕೊರತೆಯನ್ನು ಸೂಚಿಸುವ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.
►ಸೆಟೆದುಕೊಂಡ ನರ
ಸೆಟೆದುಕೊಂಡ ನರದಿಂದ ಬಳಲುತ್ತಿರುವವರಿಗೆ ಪಾದಗಳಲ್ಲಿ ಜುಮುಗುಡುವಿಕೆಯ ಅನುಭವವಾಗುತ್ತದೆ. ಗಾಯ ಅಥವಾ ಊತದಿಂದ ಬೆನ್ನಿನಲ್ಲಿಯ ನರಗಳ ಮೇಲೆ ಒತ್ತಡವು ಇದಕ್ಕೆ ಕಾರಣವಾಗಬಹುದು. ಕಾಲುಗಳಲ್ಲಿ ನೋವು,ಪಾದಗಳಲ್ಲಿ ಹೆಚ್ಚು ಅಥವಾ ಕಡಿಮೆ ಸಂವೇದನೆ ಮತ್ತು ಕುಗ್ಗಿದ ಚಲನಶೀಲತೆ ಇವು ಇದರ ಲಕ್ಷಣಗಳಾಗಿವೆ.
►ಮೂತ್ರಪಿಂಡ ವೈಫಲ್ಯ
ಮೂತ್ರಪಿಂಡ ವೈಫಲ್ಯವು ಪಾದಗಳನ್ನು ಜುಮುಗುಡಿಸುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡ ರೋಗಗಳ ಸಾಮಾನ್ಯ ಕಾರಣಗಳಲ್ಲಿ ಸೇರಿದ್ದು,ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮೂತ್ರಪಿಂಡ ವೈಫಲ್ಯವನ್ನುಂಟು ಮಾಡುತ್ತವೆ. ಸ್ನಾಯುಗಳಲ್ಲಿ ಸೆಳೆತ ಮತ್ತು ದೌರ್ಬಲ್ಯ,ಪಾದಗಳಲ್ಲಿ ನೋವು ಮತ್ತು ಮರಗಟ್ಟುವಿಕೆ ಇವು ಮೂತ್ರಪಿಂಡಕ್ಕೆ ಅಪಾಯವನ್ನು ಸೂಚಿಸುವ ಕೆಲವು ಲಕ್ಷಣಗಳಾಗಿವೆ.
►ಸೋಂಕುಗಳು
ಜುಮುಗುಡುವಿಕೆಯು ನರಗಳ ಪುನರಾವರ್ತಿತ ಗಾಯಗಳ ಒತ್ತಡಗಳು ಮತ್ತು ಬಿಗಿತದ ಲಕ್ಷಣವಾಗಿರುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಇದು ನರಗಳ ಉರಿಯೂತ ಮತ್ತು ಬ್ಯಾಕ್ಟೀರಿಯಾ ಅಥವಾ ನರಗಳ ಸೋಂಕುಗಳಿಗೆ ಕಾರಣವಾಗುತ್ತದೆ. ಸರ್ಪಸುತ್ತು,ಹೆಪಟಿಟಿಸ್ ಬಿ ಮತ್ತು ಸಿ,ಕುಷ್ಠ,ಎಚ್‌ಐವಿ,ಏಡ್ಸ್ ಮತ್ತು ಲೈಮ್ ಡಿಸೀಸ್ ಇವು ಪಾದಗಳನ್ನು ಜುಮುಗುಡಿಸುವ ಕೆಲವು ಸಾಮಾನ್ಯ ಸೋಂಕುಗಳಾಗಿವೆ. ಶರೀರವು ತನ್ನದೇ ನಿರೋಧಕ ಕೋಶಗಳ ಮೇಲೆ ದಾಳಿ ನಡೆಸುವ ಚರ್ಮಕ್ಷಯ,ಉದರದ ಕಾಯಿಲೆ ಮತ್ತು ಸಂಧಿವಾತದಂತಹ ಸ್ವರಕ್ಷಿತ ರೋಗಗಳೂ ಉರಿಯೂತಕ್ಕೆ ಕಾರಣವಾಗುತ್ತವೆ. ಅಲ್ಲದೆ ವೈರಸ್ ನಿರೋಧಕ,ಪ್ರತಿಜೀವಕ ಮತ್ತು ಕಿಮೋಥೆರಪಿಯಂತಹ ಕೆಲವು ಔಷಧಿಗಳೂ ಪಾದಗಳು ಜುಮುಗುಡುವಂತೆ ಮಾಡುತ್ತವೆ.