ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ: ಸಚಿವ ಡಿ.ಸಿ.ತಮ್ಮಣ್ಣ
ಹೊಸ ವರ್ಷಕ್ಕೆ ದರ ಏರಿಕೆ ಸಾಧ್ಯತೆ

ಬೆಂಗಳೂರು, ಡಿ. 27: ಪದೆ ಪದೇ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕುತ್ತಿದ್ದು, ಸಾರಿಗೆ ಬಸ್ ಪ್ರಮಾಣ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಸಂಬಂಧ ಶೀಘ್ರದಲ್ಲೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕೆಲದಿನಗಳ ಹಿಂದೆಯಷ್ಟೇ ಬಸ್ ಪ್ರಯಾಣ ದರಗಳನ್ನು ಶೇ.18ರಷ್ಟು ಹೆಚ್ಚಳ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸಿಎಂ ಇದನ್ನು ತಡೆಹಿಡಿದಿದ್ದರು. ಆದರೆ, 2013ರಲ್ಲಿ ಡೀಸೆಲ್ ದರ ಲೀ.ಗೆ 53ರೂ.ಗಳಿದ್ದ ವೇಳೆ ದರ ಹೆಚ್ಚಳ ಮಾಡಲಾಗಿತ್ತು. ಅಲ್ಲಿಂದ ಈವರೆಗೂ ಪ್ರಯಾಣ ದರ ಏರಿಕೆ ಮಾಡಿಲ್ಲ ಎಂದರು.
ಡೀಸೆಲ್ ಬೆಲೆ ಏರಿಕೆಯಿಂದ ಸರಕಾರಕ್ಕೆ 677ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ. ಈ ಹಿಂದೆ ಶೇ.18ರಷ್ಟು ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದಾಗ ಡೀಸೆಲ್ ದರ ಪ್ರತೀ ಲೀಟರ್‌ಗೆ 74 ರೂ.ಗಳಿತ್ತು. ಇದೀಗ ಆ ದರ 70 ರೂ.ಗಳಿಗೆ ಇಳಿಕೆಯಾಗಿದೆ. ಆದರೂ, ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಅವರು ಹೇಳಿದರು.
ಸಾರಿಗೆ ಸಂಸ್ಥೆಗಳನ್ನು ನಷ್ಟದ ಸುಳಿಯಿಂದ ತಪ್ಪಿಸುವ ದೃಷ್ಟಿಯಿಂದ ಶೇ.18ರಷ್ಟು ಅಲ್ಲದಿದ್ದರೂ, ಮುಖ್ಯಮಂತ್ರಿ ವಿವೇಚನೆಯನ್ನು ಬಳಸಿ ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಡಿ.ಸಿ. ತಮ್ಮಣ್ಣ ತಿಳಿಸಿದರು.
ಖಾಸಗಿ ಬಸ್‌ಗಳಿಗೂ ಜಿಪಿಎಸ್: ರಾಜ್ಯದಲ್ಲಿ ಸರಕಾರಿ ಬಸ್ಸುಗಳ ಜತೆ ಖಾಸಗಿ ಬಸ್ಸುಗಳಿಗೂ ಜಿಪಿಎಸ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ನಿರ್ದಿಷ್ಟ ಮಾರ್ಗದಲ್ಲಿ ಪ್ರಯಾಣಿಸುವ ವೇಳೆ ಹಲವು ಕಡೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಹೊಸ ಬಸ್ ಖರೀದಿ: ಸಾರಿಗೆ ಸಂಸ್ಥೆಗೆ 7 ಸಾವಿರ ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಆ ಪೈಕಿ ಕೆಎಸ್ಸಾರ್ಟಿಸಿಗೆ 4 ಸಾವಿರ, ಬಿಎಂಟಿಸಿಗೆ ಮೂರು ಸಾವಿರ ಹೊಸ ಬಸ್‌ಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ಅವರು ಇದೆ ವೇಳೆ ತಿಳಿಸಿದರು.
ಸಾರಿಗೆ ಇಲಾಖೆ ಬಹುತೇಕ ಬಸ್‌ಗಳು ದುರಸ್ತಿಗೆ ಬಂದಿದ್ದು, ಅವುಗಳನ್ನು ಬದಲಿಸಿ ಹೊಸ ಬಸ್‌ಗಳನ್ನು ಓಡಿಸಲಾಗುವುದು ಎಂದ ಅವರು, ಬೆಂಗಳೂರು ನಗರದಲ್ಲಿನ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮಾಲಿನ್ಯ ರಹಿತ ವಾಹನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದರು.
‘ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾರಿಗೆ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. 300ಕ್ಕೂ ಹೆಚ್ಚು ಮಂದಿ ಆರ್‌ಟಿಓದಲ್ಲಿನ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಲಾಗಿದೆ’
-ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ







