ಪುತ್ತೂರು ತಾ.ಪಂ. ನೂತನ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಬೋರ್ಕರ್ ಅವಿರೋಧ ಆಯ್ಕೆ

ಪುತ್ತೂರು, ಡಿ. 27: ತಾಲೂಕು ಪಂಚಾಯತ್‍ನ ನೂತನ ಅಧ್ಯಕ್ಷರಾಗಿ ಅರಿಯಡ್ಕ ತಾ.ಪಂ. ಕ್ಷೇತ್ರದ ಸದಸ್ಯ ಕೆ. ರಾಧಾಕೃಷ್ಣ ಬೋರ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಕೆಯ್ಯೂರು ಕ್ಷೇತ್ರದ ತಾ.ಪಂ. ಸದಸ್ಯೆ ಭವಾನಿ ಚಿದಾನಂದ ಅವರು ಬಿಜೆಪಿ ಪಕ್ಷದೊಳಗಿನ ಹಿಂದಿನ ಒಪ್ಪಂದದಂತೆ ನ.22ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಚುನಾವಣೆ ನಡೆಯಿತು. ತಾ.ಪಂ. ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಆಧಿಕಾರಿಯಾಗಿದ್ದ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಎಚ್.ಕೆ. ಕೃಷ್ಣಮೂರ್ತಿಯವರು ನಡೆಸಿಕೊಟ್ಟರು.
ಹಿಂದುಳಿದ ವರ್ಗ `ಎ'ಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ರಾಧಾಕೃಷ್ಣ ಬೋರ್ಕರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಈ ನಾಮಪತ್ರಕ್ಕೆ ನಿರ್ಗಮನ ಅಧ್ಯಕ್ಷೆ ಭವಾನಿ ಚಿದಾನಂದ ಅವರು ಸೂಚಕರಾಗಿದ್ದರು. ಏಕೈಕ ನಾಮಪತ್ರ ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ರಾಧಾಕೃಷ್ಣ ಬೋರ್ಕರ್ ಅವರು ಅವಿರೋಧ ವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಗಳು ಘೋಷಿಸಿದರು.
ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಕತ್ತಲಕಾನ ನಿವಾಸಿಯಾಗಿರುವ ನೂತನ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಈ ಹಿಂದೆ ಕೋಡಿಂಬಾಡಿ ತಾ.ಪಂ. ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಆ ಸಂದರ್ಭದಲ್ಲಿ ತಾ.ಪಂ. ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಉಳ್ಳವರಾಗಿದ್ದಾರೆ.