ಬೆಂಗಳೂರು: ಕಬ್ಬಿಣದ ಪೈಪ್‌ನಿಂದ ಹೊಡೆದು ಯುವಕನ ಕೊಲೆ

ಬೆಂಗಳೂರು, ಡಿ.27: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ನಡೆದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ದೊಡ್ಡಣ್ಣ ನಗರ ನಿವಾಸಿ, ವೃತ್ತಿಯಲ್ಲಿ ಪೈಂಟರ್ ಆಗಿದ್ದ ಜಗದೀಶ್ ಕುಮಾರ್(28) ಎಂದು ಗುರುತಿಸಲಾಗಿದೆ. ಡಿ.25ರ ಮಧ್ಯರಾತ್ರಿ 1.30ರ ಸಮಯದಲ್ಲಿ ದೊಡ್ಡಣ್ಣ ನಗರದ ಡೇ ಚರ್ಚ್ ಮುಂಭಾಗದಲ್ಲಿ ಜಗದೀಶ್ ಕುಮಾರ್ ಹಾಗೂ ಅರುಣ ಎಂಬುವರ ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದಿದೆ.
ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಅರುಣ ತನ್ನ ಸ್ನೇಹಿತರೊಂದಿಗೆ ಸೇರಿ ಕಬ್ಬಿಣದ ಪೈಪ್‌ನಿಂದ ಜಗದೀಶ್ ಕುಮಾರ್ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದನು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಜಗದೀಶ್ ಕುಮಾರ್‌ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ಮಧ್ಯರಾತ್ರಿ ಜಗದೀಶ್ ಕುಮಾರ್ ಮೃತಪಟ್ಟಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಅರುಣ(21), ಶರತ್(22), ಜಾನ್ ಪೀಟರ್(22) ಮತ್ತು ಅಪ್ಪು(22)ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.





