ನಾವೇನು ರಾಜಕೀಯ ಸನ್ಯಾಸಿಗಳಲ್ಲ: ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ

ವಿಜಯಪುರ, ಡಿ. 27: ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ವರಿಷ್ಟರು ಯಾವುದೇ ಕಾರಣಕ್ಕೂ ಒಲವು ತೋರಿಸುವುದಿಲ್ಲ. ಆದರೆ, ಮೈತ್ರಿ ಸರಕಾರ ತಾನಾಗಿಯೇ ಬಿದ್ದು ಹೋದರೆ ಪರಿಸ್ಥಿತಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ನಾವು ಯಾವುದೇ ಕಾರಣಕ್ಕೂ ಪ್ರಯತ್ನ ನಡೆಸುವುದಿಲ್ಲ. ಆದರೆ, ಅವರೇ ಬಿಜೆಪಿಗೆ ಬಂದರೆ ಸುಮ್ಮನೆ ಕೂರಲು ನಾವೇನು ರಾಜಕೀಯ ಸನ್ಯಾಸಿಗಳಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಅರಾಜಕತೆ: ರಾಜ್ಯದಲ್ಲಿನ ಮೈತ್ರಿ ಸರಕಾರ ಜನರ ಸಮಸ್ಯೆ ಆಲಿಸುವ ಬದಲಿಗೆ ಅಧಿಕಾರಕ್ಕೆ ಕಿತ್ತಾಟ ನಡೆಸಿದ್ದು, ಇದರಿಂದ ಒಂದು ರೀತಿಯಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಬಿಎಸ್‌ವೈ, ರಾಜ್ಯದ ಅಭಿವೃದ್ಧಿಯ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದರು.
ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿದೆ. ಆದರೆ, ಸರಕಾರ ಕಾಟಾಚಾರಕ್ಕೆ ಪರಿಹಾರ ಕಾಮಗಾರಿ ನಡೆಸುತ್ತಿದ್ದಾರೆ. ಸರಕಾರದ ಒಳ ಜಗಳದಿಂದ ಜನತೆ ಬೇಸತ್ತಿದ್ದಾರೆ ಎಂದ ಯಡಿಯೂರಪ್ಪ, ಸಚಿವ ಸ್ಥಾನ ಯಾರಿಗೆ ಬೇಕಾದರೂ ನೀಡಲಿ. ಜನತೆಗೆ ಒಳ್ಳೆಯ ಆಡಳಿತ ನೀಡಬೇಕು ಎಂದು ಸಲಹೆ ಮಾಡಿದರು.







