ಉಡುಪಿಯಲ್ಲಿ ಅಘೋಷಿತ ಬಂದ್ : ಜನರ ಅಸಮಾಧಾನ

ಉಡುಪಿ, ಡಿ. 27 : ಗುರುವಾರ ರಾಷ್ಟ್ರಪತಿ ಉಡುಪಿ ಭೇಟಿ ವೇಳೆ ಸುರಕ್ಷತೆ ಒದಗಿಸಲು ಹಾಗು ಸುವ್ಯವಸ್ಥೆ ಕಾಪಾಡಲು ಮಾಡಿದ 'ವ್ಯವಸ್ಥೆ'ಯಿಂದ ಸಾಮಾನ್ಯ ಜನರು ಪರದಾಡುವಂತಾಯಿತು.
ಸುಮಾರು ಮುಕ್ಕಾಲು ಗಂಟೆಯ ರಾಷ್ಟ್ರಪತಿ ಭೇಟಿಗಾಗಿ ಮುಕ್ಕಾಲು ದಿನ ಉಡುಪಿಯ ಜನರು ಸಮಸ್ಯೆ ಎದುರಿಸಬೇಕಾಯಿತೆಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಆದಿ ಉಡುಪಿಯಿಂದ ಕರಾವಳಿ ಜಂಕ್ಷನ್ ಮೂಲಕ ಮಣಿಪಾಲ ರಸ್ತೆಯಲ್ಲಿ ಮಠದ ವರೆಗೆ ರಾಷ್ಟ್ರಪತಿ ಹೋಗುವಾಗ ಮತ್ತು ಬರುವಾಗ ಎಲ್ಲ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಜೊತೆಗೆ ಸರಕಾರಿ ಅತಿಥಿ ಗೃಹಕ್ಕೆ ಹೋಗುವ ರಸ್ತೆಯಲ್ಲೂ ಈ ನಿರ್ಬಂಧ ಇತ್ತು. ಮಠದ ಸುತ್ತಮುತ್ತಲ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು. ಮಠಕ್ಕೆ ಗುರುವಾರ ಮಧ್ಯಾಹ್ನದವರೆಗೆ ಭಕ್ತರಿಗೆ ಪ್ರವೇಶ ಇರಲಿಲ್ಲ.
ಪ್ರಮುಖ ರಸ್ತೆಗಳಲ್ಲಿ ವಾಹನಗಳಿಗೆ ನಿರ್ಬಂಧ ಇದ್ದುದರಿಂದ ಅವುಗಳಿಗೆ ಹೊಂದಿಕೊಂಡ ರಸ್ತೆಗಳಿಗೂ ಅಘೋಷಿತ ನಿರ್ಬಂಧ ಬಿದ್ದಿತ್ತು. ಹೀಗಾಗಿ ಒಟ್ಟಾರೆ ಗುರುವಾರ ಉಡುಪಿಯಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಇದು ಜನರ ಅಸಮಾಧಾನಕ್ಕೂ ಕಾರಣವಾಯಿತು.
ತುರ್ತು ಕೆಲಸಗಳಿಗಾಗಿ ಉಡುಪಿ ಬರುವವರು, ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ಇದೇ ದಿನ ಇಟ್ಟುಕೊಂಡವರು, ಆಸ್ಪತ್ರೆಗಳಿಗೆ ಬರುವವರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ ಹಾಗು ಸಣ್ಣ ಪುಟ್ಟ ಅಂಗಡಿಗಳನ್ನು ನಡೆಸುವವರಿಗೆ ಇದರಿಂದ ನಷ್ಟ ಆಗುತ್ತದೆ ಎಂಬ ದೂರು ಕೇಳಿಬಂತು. ರಾಷ್ಟ್ರಪತಿ ಹೋಗುವ ದಾರಿಯಲ್ಲಿದ್ದ ಕಟ್ಟಡಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು ಎಂದೂ ಜನರು ದೂರಿದ್ದಾರೆ.
ಸಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಜನರು ಆಸಮಾಧಾನ ವ್ಯಕ್ತಪಡಿಸಿ, ಮಠಕ್ಕೆ ಬರುವವರಿಗಾಗಿ ಮಠದ ಪಕ್ಕದಲ್ಲೇ ಹೆಲಿಪ್ಯಾಡ್ ಮಾಡಬೇಕು. ಇದರಿಂದ ಜನಸಾಮಾನ್ಯರು ಪರದಾಡುವುದು ತಪ್ಪುತ್ತದೆ ಎಂದು ಹೇಳುವುದು ಕೇಳಿ ಬಂತು.