ಮಧ್ವ ಜಯಂತಿ, ಮಧ್ವ ವಿವಿಗೆ ಸಹಕಾರ ನೀಡಲು ರಾಷ್ಟ್ರಪತಿಗೆ ಮನವಿ: ಪೇಜಾವರಶ್ರೀ

ಉಡುಪಿ, ಡಿ. 27: ಕೇಂದ್ರ ಸರಕಾರ ಶಂಕರಾಚಾರ್ಯರ ಜಯಂತಿಯನ್ನು ಆಚರಿಸುತ್ತಿರುವಂತೆ, ದ್ವೈತ ಮತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ‘ಮಧ್ವ ಜಯಂತಿ’ಯನ್ನು ವಿಜಯ ದಶಮಿಯ ದಿನದಂದು ‘ಭಕ್ತಿ ದಿನಾಚರಣೆ’ ಯಾಗಿ ಹಾಗೂ ರಾಮಾನುಜಾಚಾರ್ಯ ಜಯಂತಿಯನ್ನು ‘ತತ್ತ್ವಜ್ಞಾನ ದಿನ’ವೆಂದು ಆಚರಿಸಲು ಸಹಕಾರ ನೀಡುವಂತೆ ಇಂದು ಪೇಜಾವರ ಮಠಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದರಿಗೆ ಮನವಿ ಸಲ್ಲಿಸಲಾಗಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ತಿಳಿಸಿದ್ದಾರೆ.
ಸನ್ಯಾಸ ದೀಕ್ಷೆ ಸ್ವೀಕರಿಸಿ 80 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಗೌರವ ಸಲ್ಲಿಸಲು ಆಗಮಿಸಿದ ರಾಷ್ಟ್ರಪತಿಗಳು ಉಡುಪಿಯಿಂದ ನಿರ್ಗಮಿಸಿದ ಬಳಿಕ ಪೇಜಾವರ ಮಠದಲ್ಲಿ ಸುದ್ದಿಗಾರರನ್ನು ಭೇಟಿಯಾದ ಪೇಜಾವರಶ್ರೀಗಳು ಈ ವಿಷಯ ತಿಳಿಸಿದರು.
ಅಲ್ಲದೇ ಮಧ್ವಾಚಾರ್ಯರು ಜನಿಸಿದ ಕುಂಜಾರುಗಿರಿ ಸಮೀಪದ ಪಾಜಕ ಕ್ಷೇತ್ರದಲ್ಲಿ ಮಧ್ವ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಸಿದ್ಧತೆಗಳು ನಡೆಯುತಿದ್ದು, ಇದಕ್ಕೂ ಅವರ ಸಹಕಾರವನ್ನು ಕೋರಲಾಗಿದೆ ಎಂದು ಪೇಜಾವರಶ್ರೀ ನುಡಿದರು.
ಪಾಜಕದಲ್ಲಿ ಪೇಜಾವರ ಮಠದ ವತಿಯಿಂದ ಎಲ್‌ಕೆಜಿಯಿಂದ ಪದವಿವರೆಗೆ ವಿದ್ಯಾಬ್ಯಾಸಕ್ಕಾಗಿ ವಸತಿ ಶಾಲೆಯೊಂದನ್ನು ನಿರ್ಮಿಸಲಾಗಿದೆ. ಈಗಾಗಲೇ ಅಲ್ಲಿ ಹೈಸ್ಕೂಲ್‌ವರೆಗೆ ತರಗತಿಗಳು ನಡೆಯುತ್ತಿದೆ. ಏಳು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದರು.
ಪಾಜಕದಲ್ಲಿ ಒಂದೇ ಕಡೆಯಲ್ಲಿ ಲೌಕಿಕ ಮತ್ತು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣಕ್ಕೆ ಒತ್ತು ನೀಡಲು ಮಧ್ವಾಚಾರ್ಯ ವಿವಿಯನ್ನು ಸ್ಥಾಪಿಸಲು ಚಿಂತನೆ ನಡೆಯುತ್ತಿದೆ. ಅದಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಪೇಜಾವರಶ್ರೀಗಳು ಹೇಳಿದರು.
ರಾಮಮಂದಿರ: ವಿಶ್ವ ಹಿಂದೂ ಪರಿಷತ್ ಈಗಾಗಲೇ ರಾಮ ಮಂದಿರ ನಿರ್ಮಾಣದ ಕುರಿತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವುದರಿಂದ ನಾನು ಇಲ್ಲಿ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಫೆಬ್ರವರಿ ತಿಂಗಳಲ್ಲಿ ಕುಂಭಮೇಳದ ವೇಳೆ ನಡೆಯುವ ಧರ್ಮಸಂಸದ್‌ನಲ್ಲಿ ಈ ಬಗ್ಗೆ ಸಾಧು-ಸಂತರು ತೀರ್ಮಾನ ತೆಗೆದುಕೊಳ್ಳುವರು ಎಂದರು.
ಕೇಂದ್ರ ಸರಕಾರ ರಾಮಮಂದಿರದ ಕುರಿತು ಸುಗ್ರೀವಾಜ್ಞೆ ಹೊರಡಿಸಿದರೆ ಅದರಿಂದ ಅನುಕೂಲಕ್ಕಿಂತ, ಅನಾನೂಕೂಲವೇ ಅಧಿಕ ಎಂದು ಹಿರಿಯ ವಕೀಲರು ಸಲಹೆ ನೀಡಿದ್ದು, ಹೀಗಾಗಿ ಈ ಬಗ್ಗೆ ಮರು ಚಿಂತನೆ ನಡೆದಿದೆ ಎಂದರು.
ಉಮಾಭಾರತಿಗೆ ವಿಪ್ ಅಡ್ಡಿ: ರಾಷ್ಟ್ರಪತಿಗಳು ಉಡುಪಿಗೆ ಬರಲು ಪ್ರಮುಖ ಕಾರಣರಾದ ಶಿಷ್ಯೆ ಉಮಾಭಾರತಿ ಇಂದು ಗೈರುಹಾಜರಾದ ಕುರಿತು ಪ್ರಶ್ನಿಸಿದಾಗ, ಗುರುವಾರ ಸಂಸತ್‌ನಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡನೆಯಾಗಲಿದ್ದು, ಉಮಾಭಾರತಿ ಅವರಿಗೆ ಭಾಗವಹಿಸಲು ವಿಪ್ ನೀಡಲಾಗಿದೆ. ಹೀಗಾಗಿ ರಾಷ್ಟ್ರಪತಿಗಳ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದರು.
ಬ್ರಾಹ್ಮಣರೊಂದಿಗೂ ಭೋಜನವಿಲ್ಲ
ದಲಿತರಾಗಿರುವ ರಾಷ್ಟ್ರಪತಿಗಳ ಜೊತೆ ಪೇಜಾವರ ಶ್ರೀಗಳು ಊಟ ಮಾಡಲಿ ಎಂಬ ಪ್ರಗತಿಪರರ ಆಗ್ರಹದ ಕುರಿತು ಪ್ರಶ್ನಿಸಿದಾಗ, ಉತ್ತರ ನೀಡಿದ ಶ್ರೀಗಳು, ಸನ್ಯಾಸಿಗಳು ಬ್ರಾಹ್ಮಣರೊಂದಿಗೂ ಊಟ ಮಾಡುವುದಿಲ್ಲ. ಸನ್ಯಾಸಿ ಗಳಿಗೆ ಪೂಜೆ, ನಿತ್ಯಾನುಷ್ಠಾನ, ಭೋಜನ ಸ್ವೀಕಾರ ಸೇರಿದಂತೆ ಎಲ್ಲವಕ್ಕೂ ಪರಂಪರಾಗತ ನಿಯಮಗಳಿವೆ. ಹೀಗಾಗಿ ನಾವು ಬ್ರಾಹ್ಮಣರೊಂದಿಗೆ ಬೀಕ್ಷೆ ಸ್ವೀಕರಿಸುವುದಿಲ್ಲ ಎಂದರು. ಇದನ್ನು ತಿಳಿಯದವರು ಏನೇನೊ ಮಾತನಾಡುತ್ತಾರೆ ಎಂದು ಪೇಜಾವರಶ್ರೀ ನುಡಿದರು.