ಪುತ್ತೂರು : ಜ್ವರದಿಂದ ಬಾಲಕ ಮೃತ್ಯು
ಪುತ್ತೂರು, ಡಿ. 27: ಜ್ವರದಿಂದ ಬಳಲುತ್ತಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಮುಲಾರ್ ಎಂಬಲ್ಲಿ ಗುರುವಾರ ಸಂಭವಿಸಿದೆ.
ನರಿಮೊಗ್ರು ಸಾಂದೀಪನಿ ವಿದ್ಯಾಸಂಸ್ಥೆಯ 9 ನೇ ತರಗತಿಯ ವಿದ್ಯಾರ್ಥಿ, ಮುಂಡೂರು ಗ್ರಾಮದ ಮುಲಾರ್ ನಿವಾಸಿ ರವಿಪ್ರಕಾಶ್ ಎಂಬವರ ಪುತ್ರ ಧನುಷ್ (15) ಮೃತ ಬಾಲಕ.
ಕ್ರೀಡೆ ಮತ್ತು ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಧನುಷ್ 15 ದಿನಗಳ ಹಿಂದೆ ಜ್ವರ ಬಾಧೆಗೊಳಗಾಗಿದ್ದ. ಆತನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದರೂ ಗುಣಮುಖಗೊಳ್ಳದೆ ಜ್ವರ ಮತ್ತಷ್ಟು ಉಲ್ಭಿಣಿಸಿದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಅತ್ತಾವರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿಯೂ ಧನುಷ್ ಚೇತರಿಸಿಕೊಳ್ಳದ ಕಾರಣ ಆತನನ್ನು ಬಳಿಕ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಕೋಮಾ ಸ್ಥಿತಿಯಲ್ಲಿಯೇ ಇದ್ದ ಆತ ಗುರುವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಉತ್ತಮ ಕಬಡ್ಡಿ ಆಟಗಾರನಾಗಿದ್ದ ಧನುಷ್ ಈ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ. ಮೃತ ಬಾಲಕ ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾನೆ.