ಕೇರಳದ ಪ್ರವಾಸಿಗನ ನಾಪತ್ತೆ ಪ್ರಕರಣಕ್ಕೆ ತಿರುವು
ಚಿಕ್ಕಮಗಳೂರಿನಲ್ಲಿ ನಾಪತ್ತೆಯಾಗಿದ್ದ ಸಂದೀಪ್

ಚಿಕ್ಕಮಗಳೂರು, ಡಿ.27: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕೇರಳ ಪ್ರವಾಸಿಗನ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದಿದ್ದು, ತುಂಗಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದ ಪ್ರವಾಸಿಗ ಮುಂಬಯಿಯ ಲಾಡ್ಜ್ ವೊಂದರಲ್ಲಿ ತನ್ನ ಪ್ರೇಯಸಿಯೊಂದಿಗೆ ಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.
ಕೇರಳದ ಕ್ಯಾಲಿಕಟ್‍ನಿಂದ ತನ್ನ ಬೈಕ್‍ನಲ್ಲಿ ಕರ್ನಾಟಕದ ಪ್ರವಾಸಕ್ಕೆ ಒಬ್ಬಂಟಿಯಾಗಿ ಬಂದಿದ್ದ ಸಂದೀಪ್ ಜಿಲ್ಲೆಯ ಶೃಂಗೇರಿ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದ ವೇಳೆ ನ.25ರಂದು ದಿಢೀರ್ ನಾಪತ್ತೆಯಾಗಿದ್ದ. ಇದರಿಂದ ಆತಂಕಕ್ಕೊಳಗಾದ ಸಂದೀಪ್ ಕುಟುಂಬಸ್ಥರು ಕ್ಯಾಲಿಕಟ್ ಪೊಲೀಸರಿಗೆ ದೂರು ನೀಡಿದ್ದರು. ಸಂದೀಪ್ ನಾಪತ್ತೆ ಪ್ರಕರಣ ಬೆನ್ನತ್ತಿದ್ದ ಕೇರಳ ಪೊಲೀಸರು ಸಂದೀಪ್ ಮೊಬೈಲ್ ಕರೆ ಆಧರಿಸಿ ಕೊಪ್ಪ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅದರಂತೆ ಹರಿಹರಪುರ ಠಾಣಾ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಸಂದೀಪ್ ಬಂದಿದ್ದ ಬೈಕ್ ಹಾಗೂ ಆತನ ಬ್ಯಾಗೊಂದು ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಲಾಪುರ ಗ್ರಾಮದ ತುಂಗಾ ನದಿಯ ದಡದಲ್ಲಿ ಪತ್ತೆಯಾಗಿತ್ತು.
ನದಿ ತೀರದಲ್ಲಿ ಬೈಕ್ ಪತ್ತೆಯಾದ ಹಿನ್ನೆಲೆಯಲ್ಲಿ, ಸಂದೀಪ್ ಈಜಲು ನದಿಗಿಳಿದು ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಿ ಮೂರು ದಿನಗಳ ಕಾಲ ತುಂಗಾ ನದಿಯಲ್ಲಿ ಸಂದೀಪ್‍ಗಾಗಿ ಶೋಧ ಕಾರ್ಯ ನಡೆಸಿದ್ದರು. ಸಂದೀಪ್ ಸ್ನೇಹಿತರು ಹಾಗೂ ಇಬ್ಬರು ಕೇರಳ ಪೊಲೀಸರು ಕೊಪ್ಪದಲ್ಲಿ ಬೀಡು ಬಿಟ್ಟಿದ್ದರು. ಆದರೆ ಹರಿಹರಪುರ ಪೊಲೀಸರಿಗೆ ಆತನ ಬಗ್ಗೆ ತಿಂಗಳು ಕಳೆದರೂ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂದೀಪ್ ನೀರಿನಲ್ಲೇ ಕೊಚ್ಚಿ ಹೋಗಿರಬಹುದೆಂದು ಅಥವಾ ಆತನನ್ನು ಯಾರೋ ಕಿಡ್ನಾಪ್ ಮಾಡಿರಬಹುದೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.
ಆದರೆ ತನಿಖೆ ಬೆನ್ನತ್ತಿದ್ದ ಕೇರಳ ಪೊಲೀಸರಿಗೆ ಆತ ಮುಂಬೈಯಲ್ಲಿ ಇತ್ತೀಚೆಗೆ ಲಾಡ್ಜೊಂದರಲ್ಲಿ ತನ್ನ ಪ್ರೇಯಸಿಯೊಂದಿಗೆ ಪತ್ತೆಯಾದ್ದಾನೆಂದು ತಿಳಿದು ಬಂದಿದ್ದು, ಆತನ ಪ್ರೇಯಸಿಯೂ ಇತ್ತೀಚೆಗೆ ನಾಪತ್ತೆಯಾಗಿದ್ದ ಪ್ರಕರಣ ಕೇರಳದಲ್ಲಿ ದಾಖಲಾಗಿತ್ತು. ಆಕೆಯ ಮೊಬೈಲ್ ಕರೆ ಆಧರಿಸಿ ನಾಪತ್ತೆಯಾಗಿದ್ದ ಇಬ್ಬರನ್ನೂ ಪೊಲೀಸರು ಪತ್ತೆ ಮಾಡಿದ್ದಾರೆಂದು ತಿಳಿದು ಬಂದಿದೆ.







