ನಾನು ರಾಮನನ್ನು ಅವಹೇಳನ ಮಾಡಿಲ್ಲ: ಪ್ರೊ.ಭಗವಾನ್ ಸ್ಪಷ್ಟನೆ
"ವಾಲ್ಮೀಕಿ ಬರೆದಿರುವ ರಾಮಾಯಣವನ್ನು ಸರಿಯಾಗಿ ವ್ಯಾಖ್ಯಾನಿಸಿದ್ದೇನೆ"

ಮೈಸೂರು,ಡಿ.27: ನಾನು ರಾಮನನ್ನು ಅವಹೇಳನ ಮಾಡಿಲ್ಲ. ವಾಲ್ಮೀಕಿ ಬರೆದಿರುವ ರಾಮಾಯಣವನ್ನು ಸರಿಯಾಗಿ ವ್ಯಾಖ್ಯಾನಿಸಿದ್ದೇನೆ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಸ್ಪಷ್ಟನೆ ನೀಡಿದರು.
ರಾಮ ಮಂದಿರ ಏಕೆ ಬೇಡ? ಕೃತಿ ಕುರಿತು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನ ಹಲವು ವರ್ಷಗಳಿಂದ ರಾಮಾಯಣದ ತಪ್ಪು ವ್ಯಾಖ್ಯಾನಗಳನ್ನು ನಂಬಿಕೊಂಡು ಬಂದಿದ್ದಾರೆ. ವಾಲ್ಮೀಕಿ ಪ್ರಕಾರ ರಾಮ ಶ್ರೇಷ್ಠ ಅಲ್ಲ, ಸೀತೆ ಮಾತ್ರ ಶ್ರೇಷ್ಠಳು. ಈ ವಿಚಾರಗಳನ್ನು ನಾನು ಪುಸ್ತಕದಲ್ಲಿ ಸರಿಯಾಗಿ ವ್ಯಾಖ್ಯಾನಿಸಿದ್ದೇನೆ ಎಂದು ಹೇಳಿದರು.
ನಾನು ರಾಮನನ್ನು ಅವಹೇಳನ ಮಾಡಿಲ್ಲ. ವಾಲ್ಮೀಕಿ ಬರೆದಿರುವ ರಾಮಾಯಣವನ್ನು ಸರಿಯಾಗಿ ವ್ಯಾಖ್ಯಾನಿಸಿದ್ದೇನೆ. ಶ್ರೀರಾಮ ಸೀತೆಗೆ ಮದ್ಯ ಕುಡಿಸುತ್ತಿದ್ದ, ಸ್ತ್ರೀಯರೊಂದಿಗೆ ಕಾಲ ಕಳೆಯುತ್ತಿದ್ದ ಎಂದು ವಾಲ್ಮೀಕಿ ಉಲ್ಲೇಖಿಸಿದ್ದಾರೆ. ಅದನ್ನು ನಾನು ವಿವರಿಸಿದ್ದೇನೆ, ಇದರಲ್ಲಿ ತಪ್ಪೇನಿದೆ ? ಹಿಂದೂ ದೇವತೆಗಳೆಲ್ಲ ಕಲ್ಲು. ಇದನ್ನು ನಾನು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಚಾತುವರ್ಣ ವ್ಯವಸ್ಥೆಯನ್ನು ಜೀವಂತವಾಗಿಟ್ಟುಕೊಳ್ಳುವ ಸಲುವಾಗಿ ರಾಮನನ್ನು ದೇವರು ಎಂದು ಬಿಂಬಿಸಲಾಗಿದೆ. ಬೇರೆ ಧರ್ಮದಲ್ಲಿ ಮೌಢ್ಯ ಕಂದಾಚಾರವಿದೆ. ಆದರೆ ಹಿಂದೂ ಧರ್ಮದಲ್ಲಿರುವ ರೀತಿಯ ಅಸಮಾನತೆ ಬೇರೆಲ್ಲೂ ಇಲ್ಲ ಎಂದು ಹೇಳಿದರು. ಜನ ಮೌಢ್ಯ ಕಂದಾಚಾರಗಳಿಂದ ಹೊರಗೆ ಬರಲಿ ಎಂಬ ಕಾರಣಕ್ಕೆ ಈ ಪುಸ್ತಕ ಬರೆದಿರುವುದಾಗಿ ತಿಳಿಸಿದರು.







