ಟೇಕಾಫ್ ಆಗುವ ವೇಳೆ ವಿಮಾನದಲ್ಲಿ ಬೆಂಕಿ ಅವಘಡ: ಸಚಿವ ಖಾದರ್ ಸೇರಿ 50 ಪ್ರಯಾಣಿಕರು ಪಾರು

ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.27: ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದಲ್ಲಿ ಬೆಳಗ್ಗೆ ನಡೆದಿದೆ. ಸಚಿವರು ಸೇರಿ 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಬೇಕಿದ್ದ ವಿಮಾನ ಟೇಕಾಫ್ ಆಗುವ ವೇಳೆ ಜೆಟ್ ಏರ್ವೇಸ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ವಿಮಾನದೊಳಗಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಉಸಿರುಗಟ್ಟಿದ ಅನುಭವವಾಗಿದ್ದು, ಕೂಡಲೇ ಸಚಿವ ಖಾದರ್ ಸೇರಿ ಪ್ರಯಾಣಿಕರನ್ನು ಸಿಬ್ಬಂದಿ ಕೆಳಗಿಳಿಸಿದ್ದಾರೆ.
ಬಳಿಕ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಸಿಬ್ಬಂದಿ ನಂದಿಸಿದ್ದು, 8:45ಕ್ಕೆ ಬೇರೆ ವಿಮಾನದಲ್ಲಿ ಸಚಿವರು ಸೇರಿದಂತೆ ಎಲ್ಲ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ.
Next Story