ಬಂಜಾರ ಸಮಾಜದ ಅಭಿವೃದ್ಧಿಗೆ ಸರಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ, ಡಿ.27: ಬಂಜಾರ ಸಮಾಜದ ಅಭಿವೃದ್ದಿಗೆ ನಮ್ಮ ಸರಕಾರ ಸಂಪೂರ್ಣ ಬದ್ಧವಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಮಾಜಕಲ್ಯಾಣ ಸಚಿವನಾಗಿದ್ದು, ನಿಮ್ಮೆಲ್ಲರ ಸೇವೆ ಮಾಡುವ ಮೂಲಕ ಋಣ ತೀರಿಸುವ ಸುಯೋಗ ಒದಗಿದೆ ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುರುವಾರ ಚಿತ್ತಾಪುರ ತಾಲೂಕಿನ ಮಹಾನಗರ ತಾಂಡದಲ್ಲಿ 16 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರಕಾರಿ ಪ್ರಾಥಮಿಕ ಶಾಲೆಯ ಕೋಣೆಗಳ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ದಿ ಸಲುವಾಗಿ ಸರಕಾರ ಹಲವಾರು ಯೋಜನೆ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಆದರ್ಶ ಕಾಲನಿ ನಿರ್ಮಾಣಕ್ಕಾಗಿ 202 ಕೋಟಿ ರೂ.ಈಗಾಗಲೇ ಬಿಡುಗಡೆ ಮಾಡಿದ್ದು, ಈ ಯೋಜನೆಯಲ್ಲಿ ತಾಂಡಗಳನ್ನು ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿರುವ 3 ಸಾವಿರ ತಾಂಡಗಳಲ್ಲಿ ಸಂತ ಸೇವಾಲಾಲ್ ಅಧ್ಯಯನ ಕೇಂದ್ರ ನಿರ್ಮಾಣಕ್ಕಾಗಿ ಪ್ರತಿಯೊಂದು ತಾಂಡಕ್ಕೆ 25 ಲಕ್ಷ ರೂ.ಬಿಡುಗಡೆ ಮಾಡುತ್ತಿದ್ದೇವೆ. ಸರಕಾರ ಹಲವಾರು ಯೋಜನೆಗಳ ಮೂಲಕ ಎಲ್ಲ ವರ್ಗದ ಜನರನ್ನು ಒಂದೇ ಎಂದು ಪರಿಗಣಿಸಿ ಮುಖ್ಯವಾಹಿನಿಗೆ ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ನೀವು ಈ ಪ್ರಾಮಾಣಿಕತೆಯನ್ನು ಗುರುತಿಸಬೇಕು ಎಂದು ಅವರು ಮನವಿ ಮಾಡಿದರು.
ಇತ್ತೀಚಿಗೆ ಜಾರಿಗೆ ತಂದ ಪ್ರಬುದ್ಧ ಯೋಜನೆಯ ಕುರಿತು ವಿವರಿಸಿದ ಪ್ರಿಯಾಂಕ್ ಖರ್ಗೆ, ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ವಿದೇಶಕ್ಕೆ ತೆರಳಲು ತಗಲುವ ಖರ್ಚನ್ನು ಭರಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ನೀವೆಲ್ಲ ಈ ಯೋಜನೆಯ ಲಾಭ ಪಡೆದುಕೊಂಡು ನಿಮ್ಮೆಲ್ಲರ ಸೇವೆ ಮಾಡಲು ನನಗೆ ಸ್ಪೂರ್ತಿ ನೀಡಬೇಕು ಎಂದರು.
ಕಲಬುರಗಿ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಶಿವಾನಂದ್ ಪಾಟೀಲ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಜನರಿಗೆ ಸಂಕಷ್ಟಗಳ ಸರಮಾಲೆಯನ್ನೆ ತೊಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಬರೀ ಮಾತಿನಲ್ಲೇ ಮರುಳು ಮಾಡುತ್ತಿದ್ದು, ಈ ಕುರಿತು ನೀವೆಲ್ಲ ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಭೀಮಣ್ಣ ಸಾಲಿ, ಜಗನ್ನಾಥ ರೆಡ್ಡಿ, ರಮೇಶ ಮರಗೋಳ, ಪ್ರಕಾಶ್ ಕಮಕನೂರು, ರವಿ ರಾಠೋಡ, ನಾಮದೇವ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







