ಬುಲಂದ್‌ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಆರೋಪಿಯ ಗುರುತು ಪತ್ತೆ: ಉ.ಪ್ರ ಪೊಲೀಸ್
ಬುಲಂದ್‌ಶಹರ್,ಡಿ.27: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪಿ ಯಾರೆಂದು ಸುಳಿವು ಸಿಕ್ಕಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಹತ್ಯೆ ನಡೆದು ಮೂರು ವಾರಗಳ ನಂತರ ಪೊಲೀಸರು ಈ ಹೇಳಿಕೆಯನ್ನು ನೀಡಿದ್ದಾರೆ. ಆರೋಪಿಯನ್ನು ಪ್ರಶಾಂತ್ ನಟ್ ಎಂದು ಗುರುತಿಸಲಾಗಿದ್ದು ಈತ ಡಿಸೆಂಬರ್ 3ರಂದು ಬುಲಂದ್‌ಶಹರ್‌ನಲ್ಲಿ ನಡೆದ ಗುಂಪು ಹಿಂಸಾಚಾರದ ವೇಳೆ ಸ್ಥಳದಲ್ಲಿ ಹಾಜರಿದ್ದ ಎನ್ನುವುದು ಘಟನೆಯ ವಿಡಿಯೊ ದೃಶ್ಯಾವಳಿಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವೇಳೆ ಪೊಲೀಸ್ ನಿರೀಕ್ಷಕನ ಕೈಯಿಂದ ಸೇವಾ ರಿವಾಲ್ವರನ್ನು ಕಸಿದುಕೊಂಡಿದ್ದ ವ್ಯಕ್ತಿಯನ್ನೂ ಪೊಲೀಸರು ಗುರುತಿಸಿದ್ದಾರೆ. ಈತನ ಹೆಸರು ಜಾನಿಯಾಗಿದೆ ಮತ್ತು ಈತನೂ ಬುಲಂದ್‌ಶಹರ್‌ನ ನಿವಾಸಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಶಾಂತ್ ಮತ್ತು ಜಾನಿಯ ಹೆಸರು ಕುಮಾರ್ ಹತ್ಯೆಗೆ ಸಂಬಂಧಿಸಿ ದಾಖಲಾದ ಎಫ್‌ಐಆರ್‌ನಲ್ಲಿ ಇಲ್ಲದಿದ್ದರೂ ಈ ಇಬ್ಬರನ್ನು ಹಿಂಸಾಚಾರದ ವಿಡಿಯೊಗಳಲ್ಲಿ ಒಟ್ಟಿಗೆ ನೋಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಕ್ರಿಯಾ ಪಡೆ ಈ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಅವರು ಮೀರತ್ ಅಥವಾ ನೊಯ್ಡದಲ್ಲಿ ಅಡಗಿ ಕುಳಿತಿರಬೇಕು ಎಂದು ಸಂಶಯಿಸಲಾಗಿದೆ.