ಬಿಜೆಪಿ ಸೋಲಿನಿಂದ ಕಲಿಯಬೇಕಿದೆ: ಎನ್ ಡಿಎ ಮಿತ್ರಪಕ್ಷದ ನಾಯಕಿ ಅನುಪ್ರಿಯಾ ಪಟೇಲ್

ಹೊಸದಿಲ್ಲಿ,ಡಿ.27: ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಬಿಜೆಪಿ ಕಲಿಯಬೇಕಿದೆ ಎಂದು ಎನ್‌ಡಿಎಯ ಮಿತ್ರಪಕ್ಷ ಅಪ್ನಾ ದಳದ ನಾಯಕಿ ಮತ್ತು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.
ಅನುಪ್ರಿಯಾ ಪಟೇಲ್ ಪತಿ ಆಶಿಶ್ ಪಟೇಲ್ ನೇತೃತ್ವದ ಅಪ್ನಾ ದಳ ಉತ್ತರ ಪ್ರದೇಶದಲ್ಲಿ ಒಂಬತ್ತು ಶಾಸಕರು ಮತ್ತು ಇಬ್ಬರು ಸಂಸದರನ್ನು ಹೊಂದಿದೆ. ವರದಿಗಳ ಪ್ರಕಾರ, ಅಪ್ನಾ ದಳಕ್ಕೆ ಮುಖ್ಯವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಜೊತೆ ಭಿನ್ನಾಭಿಪ್ರಾಯವಿದೆ. ಈಗಾಗಲೇ ಅನುಪ್ರಿಯಾ ಮುಖ್ಯಮಂತ್ರಿಯ ಎರಡು ಕಾರ್ಯಕ್ರಮಗಳಿಗೆ ಗೈರಾಗಿದ್ದು ಬಿಜೆಪಿ ತನ್ನ ಪಕ್ಷಕ್ಕೆ ಸರಿಯಾದ ಗೌರವ ನೀಡದಿದ್ದರೆ ಮುಂದೆಯೂ ಇದೇ ರೀತಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ್ದ ಆಶಿಶ್ ಪಟೇಲ್, ಗೌರವ ಇಲ್ಲದೆ ಹೀಗೆ ಇನ್ನಷ್ಟು ದಿನ ನಡೆಯಲು ಸಾಧ್ಯ?
ಸ್ಥಾನಗಳನ್ನು ವಿಷಯಕ್ಕೆ ಬರುವುದಾದರೆ ನಮಗೆ ಹೆಚ್ಚಿನ ಸ್ಥಾನಗಳು ಬೇಕು. ಬಿಜೆಪಿ ತನ್ನ ಸೋಲಿನಿಂದ ಕಲಿಯಬೇಕು ಎಂದು ತಿಳಿಸಿದ್ದಾರೆ. ಸದ್ಯ ಅನುಪ್ರಿಯಾ ಪಟೇಲ್ ತನ್ನ ಪತಿಯ ಹೇಳಿಕೆಯನ್ನೇ ಮುಂದುವರಿಸಿದ್ದು ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.





