ಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು: ಸಚಿವೆ ಡಾ. ಜಯಮಾಲಾ

ಉಡುಪಿ, ಡಿ. 27: ಮಕ್ಕಳು ತಾವು ಎದುರಿಸುತ್ತಿರುವ ಸಮಸ್ಯೆಗಳು, ತಮ್ಮ ಮೇಲಿನ ದೌರ್ಜನ್ಯ ಬಗ್ಗೆ ಧೈರ್ಯವಾಗಿ ಗ್ರಾಪಂಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಮಾತನಾಡಬೇಕು. ತಮ್ಮ ಹಕ್ಕುಗಳಿಗೆ ತೊಂದರೆಯಾದಾಗ ಮಕ್ಕಳ ಮಿತ್ರ ಮತ್ತು ಮಕ್ಕಳ ಸಹಾಯವಾಣಿಯ ನೆರವು ಪಡೆಯುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದ್ದಾರೆ.
ಗುರುವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಉಡುಪಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ನಿಯಮಾವಳಿ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದರು.
ಮಕ್ಕಳ ಮೇಲೆ ಹಲವು ಬಾರಿ ಮನೆ ಮತ್ತು ಶಾಲೆಗಳಲ್ಲಿ ದೌರ್ಜನ್ಯ ನಡೆಯುತ್ತವೆ. ಮಕ್ಕಳು ಇಂತಹ ಸಮಸ್ಯೆಗಳ ಬಗ್ಗೆ ಮಕ್ಕಳ ಮಿತ್ರರಲ್ಲಿ ಅಥವಾ ಸಹಾಯವಾಣಿಯಲ್ಲಿ ದೂರು ನೀಡುವಂತೆ ತಿಳಿಸಿದ ಡಾ. ಜಯಮಾಲಾ ಮಕ್ಕಳು ತಮ್ಮ ಪರಿಸರದಲ್ಲಿ ಕಂಡು ಬರುವ ಸಮಸ್ಯೆಗಳ ಬಗ್ಗೆ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡುವಂತೆ ಸಲಹೆ ನೀಡಿದರು.
ಮಕ್ಕಳ ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹದಂತಹ ಪ್ರಕರಣ ಕಂಡು ಬಂದಲ್ಲಿ ಕೂಡಲೇ ದೂರು ನೀಡುವಂತೆ ಹಾಗೂ ಪೋಷಕರು ಮಕ್ಕಳು ನೀಡುವ ದೂರುಗಳನ್ನು ಲಘುವಾಗಿ ಪರಿಗಣಿಸದೇ, ಅವುಗಳ ಬಗ್ಗೆ ಗಮನ ಹರಿಸಬೇಕು. ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ರಚಿಸಿರುವ ನಿಯಮಾವಳಿಗಳ ಅನುಷ್ಠಾನದಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ಸುರಕ್ಷತೆ, ಆಹ್ಲಾದಕರ ಮತ್ತು ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣವಾಗಲಿದೆ. ಈ ನಿಯಮಾವಳಿ ಗಳಿಂದ ಉಡುಪಿ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ನಿಯಮಾವಳಿಗಳು ಮತ್ತು ಮಕ್ಕಳ ಹಕ್ಕುಗಳು ಉಲ್ಲಂಘನೆ ಯಾದಲ್ಲಿ ಸಂಪರ್ಕಿಸಬೇಕಾದ ಟೋಲ್ ಫ್ರೀ ಸಂಖ್ಯೆ:1800-425-2900 ಮತ್ತು ಸಹಾಯವಾಣಿ ಸಂಖ್ಯೆ:080-22115292 ಕುರಿತ ಕರಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ವಿವಿಧ ಇಲಾಖೆ ಗಳು ಹಾಗೂ ಸಂಘಸಂಸ್ಥೆಗಳು ಶ್ರಮಿಸಿ ಮಕ್ಕಳ ಹಕ್ಕುಗಳ ರಕ್ಷಣಾ ನಿಯಮಾವಳಿ ಗಳನ್ನು ರಚಿಸಲಾಗಿದೆ. ಈ ನಿಯಮಗಳನ್ನು ಮಕ್ಕಳಿಗೆ ಸಂಬಂದಿಸಿದ ಎಲ್ಲಾ ಕಾಯಿದೆ ನಿಯಮಗಳಿಗೆ ಅನುಗುಣವಾಗಿ ರೂಪಿಸಿದ್ದು, ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಜಿಲ್ಲೆಯಾದ್ಯಂತ ಇರಬೇಕಾದ ವ್ಯವಸ್ಥೆಗಳ ಬಗ್ಗೆ ಹಾಗೂ ಮಕ್ಕಳ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಗ್ರಾಪಂ, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಕ್ಷಿಪ್ರ ಸ್ಪಂದನಾ ಪಡೆ ರಚಿಸಲಾಗಿದೆ ಎಂದರು.
ಈ ಕಾರ್ಯಪಡೆಯಲ್ಲಿ ಶೇ.60 ಮಕ್ಕಳೇ ಸದಸ್ಯರಾಗಿದ್ದಾರೆ. ಮಕ್ಕಳ ಪಾಲುದಾರಿಕೆ ಜೊತೆಗೆ ಸಮುದಾಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಸಹಯೋಗದ ಮೂಲಕ ಜಿಲ್ಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿ, ದೇಶಕ್ಕೇ ಮಾದರಿ ಜಿಲ್ಲೆಯಾಗಲಿದೆ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣಾ ನಿಯಮಾವಳಿಯ ಪರಿಚಯ ಮತ್ತು ವ್ಯವಸ್ಥೆಗಳ ಬಗ್ಗೆ ದಿ ಕನ್ಸರ್ನ್ಡ್ ಪಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ದಾಮೋದರ ಆಚಾರ್ಯ ಮಾಹಿತಿ ನೀಡಿದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಉಪಾಧ್ಯಕ್ಷ ಶೀಲಾ ಶೆಟ್ಟಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಕ್ಕಳ ಮಿತ್ರ ಪ್ರತಿನಿಧಿ ಶಂಕರ ನಾರಾಯಣ ಛಾತ್ರಾ, ಮಕ್ಕಳ ಸಂಘದ ಪ್ರತಿನಿಧಿ ಪವನ್ ಕುಮಾರ್, ರೂಪಾ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ್ ವಂದಿಸಿದರು. ಬಳಿಕ ಮಕ್ಕಳ ಹಕ್ಕುಗಳ ಕುರಿತಾದ ಕಿರು ನಾಟಕ ನಡೆಯಿತು.