2019ರ ಚುನಾವಣೆಗೂ ಮುನ್ನ ಎನ್‌ಡಿಎ ಹೊಸ ಮಿತ್ರರನ್ನು ಪಡೆಯಲಿದೆ: ಬಿಜೆಪಿ
ಹೊಸದಿಲ್ಲಿ,ಡಿ.26: ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಬಿಜೆಪಿ ವಿರುದ್ಧ ಎನ್‌ಡಿಎ ಮಿತ್ರಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆಯಲ್ಲಿ ತಮಗೂ ಸಮಪಾಲು ಮತ್ತು ಗೌರವವನ್ನು ನೀಡುವಂತೆ ಆಗ್ರಹಿಸಿವೆ.
ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಈಗಾಗಲೇ ಎನ್‌ಡಿಎ ತೊರೆದಿದ್ದು ಕಾಂಗ್ರೆಸ್‌ನ ಮಹಾಮೈತ್ರಿ ಜೊತೆ ಕೈಜೋಡಿಸಿದ್ದಾರೆ. ಆದರೆ ಸದ್ಯ ತನ್ನ ಹಳೆ ಮಿತ್ರರು ತನ್ನನ್ನು ತೊರೆದು ಹೋಗುತ್ತಿರುವ ಬಗ್ಗೆ ಚಿಂತೆ ವ್ಯಕ್ತಪಡಿಸದ ಬಿಜೆಪಿ, 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಹೊಸ ಪಕ್ಷಗಳು ಎನ್‌ಡಿಎ ಸೇರುವ ಆಶಾವಾದ ವ್ಯಕ್ತಪಡಿಸಿದೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್, ದಕ್ಷಿಣ ಮತ್ತು ಪೂರ್ವ ಭಾರತದ ಹಲವು ಪಕ್ಷಗಳು ನಮ್ಮ ಜೊತೆ ಕೈಜೋಡಿಸುತ್ತಿವೆ. ಚುನಾವಣೆಗೆ ಮುನ್ನ ಇಂಥ ಬೆಳವಣಿಗೆಗಳು ಸಾಮಾನ್ಯ ಮತ್ತು ಅದರಲ್ಲೇನೂ ವಿಶೇಷವಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಬಿಹಾರದಲ್ಲಿ ಕಳೆದ ವಾರವಷ್ಟೇ ಸ್ಥಾನ ಹಂಚಿಕೆ ಮಾಡಿಕೊಂಡಿದ್ದೇವೆ. ಮೈತ್ರಿಕೂಟ ಎಂದಾಗ ಹೊಂದಾಣಿಕೆ ಅತ್ಯಗತ್ಯ. ಆರ್‌ಎಲ್‌ಎಸ್‌ಪಿ ಬಿಹಾರದಲ್ಲಿ ನಮ್ಮ ಜೊತೆ ಮೈತ್ರಿ ಕಳೆದುಕೊಂಡಿರುವುದು ನಿಜ. ಆದರೆ ನಮ್ಮ ಜೊತೆ ಹೊಸ ಮಿತ್ರರು ಸೇರಿಕೊಳ್ಳುತ್ತಿದ್ದಾರೆ ಎಂದು ರಾಮ ಮಾಧವ್ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದೆ. ಬಿಜೆಪಿ ಈಗಾಗಲೇ ಮೂರು ಮಿತ್ರಪಕ್ಷಗಳನ್ನು ಕಳೆದುಕೊಂಡಿದೆ. ಕಳೆದ ಮಾರ್ಚ್‌ನಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಿಜೆಪಿ ವಿರುದ್ಧ ಬಂಡಾಯವೆದ್ದು, ಮೈತ್ರಿಕೂಟದಿಂದ ಹೊರಬಂದಿದ್ದರು. ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿಯ ಪೀಪಲ್ಸ್ ಡೆಮಾಕ್ರಾಟಿಕ್ ಪಕ್ಷ ಎನ್‌ಡಿಎ ತೊರೆದಿತ್ತು. ಇತ್ತೀಚೆಗೆ ಆರ್‌ಎಲ್‌ಎಸ್‌ಪಿ ಬಿಜೆಪಿ ದೋಸ್ತಿಯನ್ನು ಮುರಿದು ಕಾಂಗ್ರೆಸ್ ಜೊತೆ ಕೈಜೋಡಿಸಿತ್ತು.