ಆರೋಪಿಗಳಿಗೆ ಶಿಕ್ಷೆಯಾದ ನಂತರ ಬೆದರಿಕೆ ಕರೆಗಳು: ಮೃತಪಟ್ಟ ಅನ್ಸಾರಿ ಪತ್ನಿ
ಜಾನುವಾರು ವ್ಯಾಪಾರಿಗಳ ಥಳಿಸಿ ಹತ್ಯೆ ಪ್ರಕರಣ
ಹೊಸದಿಲ್ಲಿ, ಡಿ. 27: ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ 2006ರಲ್ಲಿ ಗುಂಪು ಥಳಿತಕ್ಕೆ ಒಳಗಾಗಿ ಹತ್ಯೆಯಾದ ಇಬ್ಬರು ಜಾನುವಾರು ವ್ಯಾಪಾರಿಗಳ ಕುಟುಂಬ ಗುರುವಾರ ರಾಜ್ಯ ಸರಕಾರದಿಂದ ಆರ್ಥಿಕ ನೆರವು ಹಾಗೂ ಉದ್ಯೋಗ ನೀಡುವಂತೆ ಕೋರಿದೆ. ಮಜ್ಲುಂ ಅನ್ಸಾರಿ ಹಾಗೂ ಇಮ್ತಿಯಾಝ್ ಖಾನ್ ಅವರನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಜಾರ್ಖಂಡ್ ನ್ಯಾಯಾಲಯ ಕಳೆದ ವಾರ 8 ಮಂದಿಯನ್ನು ದೋಷಿ ಎಂದು ಪರಿಗಣಿಸಿತ್ತು ಹಾಗೂ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಎಲ್ಲ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿದ ಬಳಿ ಕೂಡ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅನ್ಸಾರಿ ಅವರ ಪತ್ನಿ ಸಾಯರಾ ಬೀಬಿ ಹೇಳಿದ್ದಾರೆ. ಆದಾಯದ ಮೂಲವಾಗಿದ್ದ ಅನ್ಸಾರಿಯನ್ನು ಕಳೆದುಕೊಂಡ ತಮಗೆ ಆರ್ಥಿಕ ನೆರವು ನೀಡುವಂತೆ ಬೀಬಿ ಅವರ ಕುಟುಂಬ ಸರಕಾರವನ್ನು ಕೋರಿದೆ. ಮಜ್ಲುಂ ಅನ್ಸಾರಿ ಪತ್ನಿ ಹಾಗೂ ಐದು ಮಕ್ಕಳನ್ನು ಅಗಲಿದ್ದಾರೆ. ‘‘ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡುವಂತೆ ನಾನು ಜಾರ್ಖಂಡ್ ಸರಕಾರದಲ್ಲಿ ಮನವಿ ಮಾಡುತ್ತೇನೆ. ನಾನು ನೆರವಿಗೆ ಎಲ್ಲಿಗೆ ಹೋಗಬೇಕು? ನನ್ನ ಮಕ್ಕಳಿಗೆ ಅಹಾರ ನೀಡಲು ನನ್ನಲ್ಲಿ ಹಣವಿಲ್ಲ’’ ಎಂದು ಸಾಯರಾ ಬೀಬಿ ಹೇಳಿದ್ದಾರೆ.
ತನ್ನ ಪುತ್ರನ ಮಗನಿಗೆ ಕೇವಲ 13 ವರ್ಷ ಎಂದು ಇಮ್ತಿಯಾಝ್ ಖಾನ್ ಅವರ ತಾಯಿ ನಜ್ಮಾ ಬೀಬಿ ಹೇಳಿದ್ದಾರೆ. ‘‘ನಾವು ಭೀತಿಯ ನೆರಳಿನಲ್ಲಿ ಬದುಕುತ್ತಿದ್ದೇವೆ. ಬೆದರಿಕೆ ಹಿನ್ನೆಲೆಯಲ್ಲಿ ನನ್ನ ಹಿರಿಯ ಪುತ್ರ ಮನೆ ತ್ಯಜಿಸಿ ರಾಂಚಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನನ್ನ ಕಿರಿಯ ಪುತ್ರ ಕೂಡ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ’’ ಎಂದು ಅವರು ಹೇಳಿದ್ದಾರೆ. ‘‘ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರಕಾರದಲ್ಲಿ ಮನವಿ ಮಾಡುತ್ತೇನೆ. ಅಲ್ಲದೆ, ರಾಜ್ಯ ಸರಕಾರ ಆರ್ಥಿಕ ನೆರವು ಹಾಗೂ ಉದ್ಯೋಗ ನೀಡುವಂತೆ ಕೋರುತ್ತೇನೆ’’ ಎಂದು ನಜ್ಮಾ ಬೀಬಿ ಹೇಳಿದ್ದಾರೆ.