‘ಪಾಪು ಗಾಂಧಿ-ಗಾಂಧಿ ಬಾಪು’ ರಂಗರೂಪಕ: ನಾಟಕ ಪ್ರದರ್ಶನಕ್ಕೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಚಾಲನೆ

ಮಡಿಕೇರಿ, ಡಿ.27: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಪಾಪು ಗಾಂಧಿ-ಗಾಂಧಿ ಬಾಪು ಕಥೆ ರಂಗರೂಪಕ ನಾಟಕ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಅವರು ಗಾಂಧೀಜಿಯವರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ. ಇಂತಹ ಮಹಾನ್ ವ್ಯಕ್ತಿಯ ಜೀವನದ ಕುರಿತು ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಗಾಂಧೀಜಿಯವರ ತತ್ವ-ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿ.ಪಂ.ಸಿಇಒ ಲಕ್ಷ್ಮೀಪ್ರಿಯ ಅವರು ಮಾತನಾಡಿ ಜಿಲ್ಲೆಯ ಶಾಲಾ ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ಮಹಾತ್ಮ ಗಾಂಧೀಜಿಯವರ “ಪಾಪು ಗಾಂಧಿ-ಗಾಂಧಿ ಬಾಪು” ಆದ ಕಥೆ ರಂಗರೂಪಕ ನಾಟಕ ಪ್ರದರ್ಶನವು ಡಿಸೆಂಬರ್, 27 ರಿಂದ ಜನವರಿ, 13 ರವರೆಗೆ ನಡೆಯಲಿದೆ. ನಾಟಕವನ್ನು ನೋಡುವುದು ಮಾತ್ರವಲ್ಲ ಅದರಲ್ಲಿರುವ ಉತ್ತಮ ಅಂಶಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯವರು ಗಾಂಧಿ ಜಯಂತಿ ದಿನದಂದು ಮಾತ್ರ ನೆನೆಪಿಸಿಕೊಳ್ಳದೇ ಪ್ರತಿ ದಿನ ನೆನಪಿಸಿಕೊಳ್ಳಬೇಕು. ಗಾಂಧಿಜೀಯವರ ಸಂದೇಶ, ತತ್ವಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ವೋದಯ ಸಮಿತಿ ಜಿಲ್ಲಾ ಅಧ್ಯಕ್ಷರಾದ ಟಿ.ಪಿ.ರಮೇಶ ಅವರು ಮಾತನಾಡಿ, ಮಕ್ಕಳು ಗಾಂಧೀಜಿಯವರಂತೆ ಜೀವನ ನಡೆಸಬೇಕು. ಸತ್ಯ, ನ್ಯಾಯ, ನೀತಿ, ಧರ್ಮದ ಬಗ್ಗೆ ಧ್ವನಿ ಎತ್ತಬೇಕು. ಗಾಂಧಿಜೀಯವರ ಆದರ್ಶ ಪಾಲನೆ ಜೀವನ ಸಾರಾಂಶ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ತಂದೆ-ತಾಯಿಯನ್ನು ನೆನಪಿಸಿಕೊಳ್ಳುವ ಹಾಗೆ ಸದಾ ಅವರನ್ನು ನೆನಪಿಸಿಕೊಳ್ಳಬೇಕು. ಹಿಂಸೆ ಇಲ್ಲದೇ ಅಹಿಂಸೆ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಅಹಿಂಸೆ ಮೂಲಕವು ಜಯವನ್ನು ಗಳಿಸಬಹುದು ಎಂಬುದನ್ನು ಇಡೀ ವಿಶ್ವಕ್ಕೆ ಮಾದರಿ ಸಂದೇಶವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.
ಸರ್ವೋದಯ ಸಮಿತಿ ಸದಸ್ಯರಾದ ಕೆ.ಟಿ.ಬೇಬಿಮ್ಯಾಥ್ಯೂ ಅವರು ಮಾತನಾಡಿ, ದೇಶಕ್ಕೆ ಹೋರಾಡಿದ ಪುಣ್ಯ ಪುರುಷರ ನಾಟಕಗಳು ಈಗೀಗ ವಿರಳವಾಗುತ್ತಿದ್ದು, ಮಕ್ಕಳಿಗೆ ದೇಶಕ್ಕೆ ಹೋರಾಡಿದ ಮಹಾನ್ ವ್ಯಕ್ತಿಗಳ ಪರಿಚಯ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ನಾಟಕಗಳು ಮಕ್ಕಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತವೆ. ಗಾಂಧಿಜೀಯವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಅವರಂತೆ ಬದುಕಿದಾಗ ಮಾತ್ರ ಅವರಿಗೆ ನಾವು ನೀಡುವ ಗೌರವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗರೂಪಕ ನಾಟಕ ತಂಡದ ವ್ಯವಸ್ಥಾಪಕರಾದ ಮಧ್ವರಾಜ್, ಜಿಲ್ಲಾ ಸಂಚಾಲಕರಾದ ಸಜನ್ ಮಂದಣ್ಣ, ನಿಶಾಂತ್ ಮುತ್ತಣ್ಣ, ಕಾಲೇಜು ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಇತರರು ಇದ್ದರು.
ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಕಾಲೇಜಿನ ಉಪನ್ಯಾಸಕರಾದ ಚಿದಾನಂದ ಅವರು ನಿರೂಪಿಸಿದರು, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವಿಜಯ ಅವರು ವಂದಿಸಿದರು.







