ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವ ಕಾರ್ಯ ಚುರುಕು: ಸಚಿವ ಸಾ.ರಾ.ಮಹೇಶ್
ಕೊಡಗು ಜಳಪ್ರಳಯ

ಮಡಿಕೇರಿ, ಡಿ.27: ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವ ಕಾರ್ಯವನ್ನು ಚುರುಕುಗೊಳಿಸಲಾಗುವುದೆಂದು ತಿಳಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸುಮಾರು 5 ಕಡೆಗಳಲ್ಲಿ 770 ಮನೆಗಳ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಸತಿ ಸಚಿವ ಯು.ಟಿ.ಖಾದರ್ ಅವರೊಂದಿಗೆ ವಸತಿ ಕಾಮಗಾರಿ ಕುರಿತು ಚರ್ಚಿಸಲಾಗಿದೆ. ಮಳೆಗಾಲ ಆರಂಭವಾಗುವುದರಿಂದ ಮುಂದಿನ 4 ತಿಂಗಳು ಮಾತ್ರ ಕಾಮಗಾರಿ ಕೈಗೊಳ್ಳಲು ಸಾದ್ಯವಾಗಲಿದೆ. ಈ ಕಾರಣದಿಂದ ಮನೆ ನಿರ್ಮಾಣದ ತಂಡಗಳನ್ನು ಹೆಚ್ಚಿಸಲು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಸುಮಾರು 850 ಫಲಾನುಭವಿಗಳನ್ನು ಆಯ್ಕೆ ಮಾಡಿ ಬಾಡಿಗೆ, ದಿನಸಿ ಮತ್ತು ಮಂಜೂರಾತಿ ಪತ್ರ ನೀಡಲಾಗಿದ್ದು, ನಿವೇಶನ ನೀಡುವ ಕಾರ್ಯ ನಡೆಯುತ್ತಿದೆ. ಅರ್ಹ ಫಲಾನುಭವಿಗಳು ಸರ್ಕಾರದ ಪರಿಹಾರದಿಂದ ಹೊರಗುಳಿದಿದ್ದಾರೆ ಎಂದು ಶಾಸಕರು ಗಮನ ಸೆಳೆದಿದ್ದು, ಅಧಿಕಾರಿಗಳು ಇತ್ತೀಚೆಗೆ ನೀಡಿದ ವರದಿಯಲ್ಲಿ ಬೆರಳೆಣಿಯಷ್ಟು ಮಂದಿ ಹೊರಗುಳಿದ ಸಂತ್ರಸ್ತರು ಪತ್ತೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಸಂತ್ರಸ್ತರು ಪರಿಹಾರದಿಂದ ವಂಚಿತರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವುದರಿಂದ ತಾನೇ ಖುದ್ದು ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರ ಬಗ್ಗೆ ಮಾಹಿತಿ ಪಡೆಯುವುದಾಗಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದ ಸಂದರ್ಭ ಮರಗಳು ಬೇರೆ ಬೇರೆ ಕಡೆಗಳಿಂದ ಸ್ಥಳಾಂತರಗೊಂಡಿವೆ. ಮರಗಳ ಮಾಲಕರನ್ನು ಗುರುತಿಸುವುದು ಕೂಡ ಅಸಾಧ್ಯವಾಗಿದೆ. ಈ ಬಗ್ಗೆ ಸರ್ಕಾರ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದು, ವರದಿ ಬಂದ ನಂತರ ಮುಖ್ಯಮಂತ್ರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಜನರಲ್ ತಿಮ್ಮಯ್ಯ ಸ್ಮಾರಕ ಭವನದ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.
ತುರ್ತಾಗಿ ಆಗಬೇಕಾಗಿರುವ ರಸ್ತೆ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಸಚಿವರು ಕ್ರಮ ಕೈಗೊಂಡಿದ್ದು, 5 ಲಕ್ಷ ರೂ. ಒಳಗಿರುವ ಕಾಮಗಾರಿಗಳು ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು. ಮರಳು ಸಾಗಾಟದ ವಿಚಾರದಲ್ಲಿ ಯಾರಿಗೂ ವಿನಾಯಿತಿ ನೀಡಿಲ್ಲ, ಆಶ್ರಯ ಮನೆ ನಿರ್ಮಾಣಕ್ಕೆ ಮಾನವೀಯತೆ ದೃಷ್ಟಿಯಿಂದ ಮರಳು ನೀಡಲಾಗುತ್ತಿದೆ. ಆದರೆ ವಾಹನಗಳಲ್ಲಿ ಮರಳು ಸಾಗಾಟಕ್ಕೆ ಅನುಮತಿ ನೀಡಲು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.







