ಕ್ಯಾಲಿಫೋರ್ನಿಯ: ಕರ್ತವ್ಯದಲ್ಲಿದ್ದ ಭಾರತ ಮೂಲದ ಪೊಲೀಸ್ ಅಧಿಕಾರಿಯ ಹತ್ಯೆ

ನ್ಯೂಯಾರ್ಕ್, ಡಿ. 27: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಭಾರತ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಅಜ್ಞಾತ ಬಂದೂಕುಧಾರಿಯೊಬ್ಬ ಅವರನ್ನು ಗುಂಡು ಹಾರಿಸಿ ಕೊಂದಿದ್ದಾನೆ.
ನ್ಯೂಮನ್ ಪೊಲೀಸ್ ಇಲಾಖೆಯ 33 ವರ್ಷದ ಕಾರ್ಪೋರಲ್ ರೊನಿಲ್ ಸಿಂಗ್ ಮೃತಪಟ್ಟವರು. ಅವರು ಕ್ರಿಸ್‌ಮಸ್ ರಾತ್ರಿಯಂದು ಓವರ್‌ಟೈಮ್ ಕೆಲಸ ಮಾಡುತ್ತಿದ್ದರು.
‘‘ಕೆಲವು ಕ್ಷಣಗಳ ಬಳಿಕ, ‘ಗುಂಡು ಹಾರಿಸಲಾಗಿದೆ’ ಎಂಬುದಾಗಿ ಅವರು ರೇಡಿಯೊದಲ್ಲಿ ಕೂಗಿ ಹೇಳಿದರು’’ ಎಂದು ಸ್ಟಾನಿಸ್ಲಾಸ್ ಕೌಂಟಿ ಶೆರಿಫ್ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
‘‘ಹಲವಾರು ಭದ್ರತಾ ಸಂಸ್ಥೆಗಳು ನೆರವಿಗೆ ಧಾವಿಸಿದವು. ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಸಿಂಗ್‌ರನ್ನು ಭದ್ರತಾ ಸಿಬ್ಬಂದಿ ಪತ್ತೆಹಚ್ಚಿದರು’’ ಎಂದು ಹೇಳಿಕೆ ತಿಳಿಸಿದೆ.
ಅವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಲಾಯಿತು.
ಸ್ಟಾನಿಸ್ಲಾಸ್ ಕೌಂಟಿ ಶೆರಿಫ್ ಇಲಾಖೆ ಘಟನೆಯ ತನಿಖೆ ನಡೆಸುತ್ತಿದ್ದು, ಶಂಕಿತ ಮತ್ತು ಅವನ ವಾಹನದ ಸಿಸಿಟಿವಿ ಚಿತ್ರಗಳನ್ನು ಬಿಡುಗಡೆ ಮಾಡಿದೆ ಹಾಗೂ ಶಂಕಿತನ ಪತ್ತೆಗೆ ನೆರವು ನೀಡುವಂತೆ ಸಾರ್ವಜನಿಕರನ್ನು ಕೋರಿದೆ.
ನ್ಯೂಮನ್ ಪೊಲೀಸ್ ಇಲಾಖೆಯಲ್ಲಿ 7 ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಂಗ್‌ಗೆ ‘ಕ್ಯಾನೈನ್ ಆಫಿಸರ್’ ದರ್ಜೆ ನೀಡಲಾಗಿತ್ತು.
ಅವರು ಪತ್ನಿ ಅನಾಮಿಕಾ ಮತ್ತು 5 ತಿಂಗಳ ಮಗನನ್ನು ಅಗಲಿದ್ದಾರೆ.
ಅವರು ಫಿಜಿ ನಿವಾಸಿಯಾಗಿದ್ದು, ಬಳಿಕ ಅಮೆರಿಕಕ್ಕೆ ವಲಸೆ ಹೋಗಿದ್ದರು.







