ಜಾಲತಾಣದಲ್ಲಿ ಯೇಸುಕ್ರಿಸ್ತರ ಬಗ್ಗೆ ಆಕ್ಷೇಪಾರ್ಹ ಫೋಟೋ: ಕಿಡಿಗೇಡಿಯ ಬಂಧನಕ್ಕೆ ಆಗ್ರಹ

ಮಡಿಕೇರಿ, ಡಿ.28 : ಸಾಮಾಜಿಕ ಜಾಲತಾಣದಲ್ಲಿ ಯೇಸುಕ್ರಿಸ್ತರ ಬಗ್ಗೆ ಆಕ್ಷೇಪಾರ್ಹ ಫೋಟೋಗಳನ್ನು ಲಗತ್ತಿಸಿ ಕ್ರೈಸ್ತರ ಭಾವನೆಗೆ ಧಕ್ಕೆ ತಂದಿರುವ ಬಾಗಲಕೋಟೆಯ ರವೀಂದ್ರ ಪಾಟೀಲ ಎಂಬಾತನನ್ನು ತಕ್ಷಣ ಬಂಧಿಸಿ ಕಾನೂನಿನ ಚೌಕಟ್ಟಿನಡಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಜಾನ್ಸನ್ ಅವರು, ಶುಭಾಶಯ ಕೋರುವ ನೆಪದಲ್ಲಿ ರವೀಂದ್ರ ಪಾಟೀಲ ಎಂಬಾತ ಯೇಸುವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮೂಲಕ ಇಡೀ ವಿಶ್ವದ ಕ್ರೈಸ್ತ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಯೇಸುಕ್ರಿಸ್ತ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರಿದ ಮಹಾ ಪುರುಷನಾಗಿದ್ದು, ಆತನನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವ ಸಂಚು ನಡೆದಿದೆ. ಅಶಾಂತಿ ಸೃಷ್ಟಿಸುವುದು ಈ ಕೃತ್ಯದ ಹಿಂದಿನ ಉದ್ದೇಶವಾಗಿದ್ದು, ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದರು.
ರವೀಂದ್ರ ಪಾಟೀಲ ಅಸ್ತ್ರವಿಲ್ಲದ ಭಯೋತ್ಪಾದಕ ಎಂದು ಟೀಕಿಸಿದ ಅವರು, ಆತ ಅಕ್ಷರದ ಮೂಲಕ ಭಯೋತ್ಪಾದನೆಯನ್ನು ಸೃಷ್ಟಿಸಲು ಯತ್ನಿಸಿದ್ದಾನೆ. ಕ್ರೈಸ್ತ ಧರ್ಮದ ತತ್ವಗಳ ಅರಿವಿಲ್ಲದೆ ಆತ ಇಂತಹ ಸಂದೇಶವನ್ನು ರವಾನಿಸಿ ಕ್ರೈಸ್ತರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾನೆ ಎಂದು ಟೀಕಿಸಿದರು. ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸಿದ್ದಾಪುರ, ದಕ್ಷಿಣ ಕನ್ನಡದ ಬೆಳ್ತಂಗಡಿ, ಮಂಗಳೂರು ಮುಂತಾದ ಕಡೆ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜ.3ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸೋಮವಾರಪೇಟೆಯ ಸಂತ ಜೋಸೆಫರ ಪದವಿಪೂರ್ವ ಕಾಲೇಜ್‍ನ ಪ್ರಾಂಶುಪಾಲ ಹಾಗೂ ಧರ್ಮಗುರು ಟೆನ್ನಿಕುರಿಯನ್ ಮಾತನಾಡಿ, ಶಾಂತಿ ಮತ್ತು ಪ್ರೀತಿಯ ಮೂಲಕ ಇಡೀ ಮನುಷ್ಯ ಸಮಾಜವನ್ನು ಪ್ರೀತಿಸುವಂತೆ ಸಂದೇಶ ನೀಡಿದ ಏಸು ಕ್ರೈಸ್ತನ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರುವುದು ನಮಗೆ ತೀವ್ರ ದುಃಖವಾಗಿದೆ. ಯಾವುದೇ ಪ್ರಜೆ ಯಾವುದೇ ಧರ್ಮವನ್ನು ಅವಹೇಳನ ಮಾಡಬಾರದು. ಆ ನಿಟ್ಟಿನಲ್ಲಿ ಸರಕಾರಗಳು ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು ಎಂದು ಹೇಳಿದರು.
ಸಂಘದ ಸಂಚಾಲಕ ಜೋಕಿಂ ರಾಡ್ರಿಗಸ್ ಮಾತನಾಡಿ, ಈಗಾಗಲೇ ಸಾಂಕೇತಿಕ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ಸ್ಪಂದನೆ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳ ಕ್ರೈಸ್ತಬಾಂಧವರನ್ನು ಸಂಘಟಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಜೋಸೆಫ್ ಶ್ಯಾಂ, ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ ಹಾಗೂ ಖಜಾಂಚಿ ಐ.ಡಿ.ರಾಯ್ ಉಪಸ್ಥಿತರಿದ್ದರು.







