ಮೂಡಿಗೆರೆ: ಪ್ರೇಮಿಗಳಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ಯುವಕ ಸಾವು
ಯುವತಿ ಸ್ಥಿತಿ ಗಂಭೀರ

ಮೂಡಿಗೆರೆ, ಡಿ.28: ಪರಸ್ಪರ ಪ್ರೀತಿಸುತ್ತಿದ್ದ ಹಾಸನದ ಪ್ರೇಮಿಗಳಿಬ್ಬರು ಮನೆಯನ್ನು ಬಿಟ್ಟು ಬಂದು ವಿಷ ಸೇವಿಸಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ಸಮೀಪದ ಕೋರಹಳ್ಳಿ ಗ್ರಾಮದ ಮೋಹನ್ ಕುಮಾರ್ ಎಂಬವರ ಪುತ್ರ ಕೀರ್ತಿ (22) ಅದೇ ಪ್ರದೇಶದ ಸಹನಾ(19) ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರೆಂದು ಹೇಳಲಾಗಿದೆ. ಇವರಿಬ್ಬರ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದಾಗ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ವಾರ ಈ ಬಗ್ಗೆ ಹಾಸನ ನಗರದ ಕೆ.ಆರ್.ಪುರಂ ಠಾಣೆಗೆ ದೂರು ನೀಡಿದ್ದರಿಂದ ಠಾಣೆಯಲ್ಲಿ ವಿಚಾರಣೆ ನಡೆಸಿ ಮುಚ್ಚಳಿಕೆ ಬರೆದು ಕಳುಹಿಸಲಾಗಿತ್ತು. ಬಳಿಕ, ಡಿ.26ರಂದು ಮನೆ ಬಿಟ್ಟು ಹೋದ ಇಬ್ಬರೂ ವಾಪಾಸು ಬಂದಿರಲಿಲ್ಲ ಎಂದು ತಿಳಿದು ಬಂದಿದೆ.
ಗುರುವಾರ ಮಧ್ಯರಾತ್ರಿ ಮೂಡಿಗೆರೆ ಪಟ್ಟಣದ ತತ್ಕೋಳ ರಸ್ತೆಯ ಹೆಸಗಲ್ ಚಂದ್ರೇಗೌಡ ಎಂಬವರ ತೋಟಕ್ಕೆ ಸ್ಕೂಟರ್ ಮೂಲಕ ತೆರಳಿದ್ದ ಈ ಪ್ರೇಮಿಗಳು ತೋಟದಲ್ಲಿ ವಿಷ ಸೇವಿಸಿದ್ದು, ನಂತರ ಕೂಗಿಕೊಂಡಿದ್ದಾರೆ. ಸಮೀಪದ ಕೂಲಿ ಲೈನಿನ ನಿವಾಸಿಗಳು ದೆವ್ವಗಳು ಕೂಗುತ್ತಿವೆ ಎಂದು ಸುಮ್ಮನಾಗಿದ್ದಾರೆಂದು ಹೇಳಲಾಗುತ್ತಿದ್ದು, ಶುಕ್ರವಾರ ಬೆಳಗ್ಗೆ ಕೂಗಾಟದ ಸದ್ದು ಕೇಳಿ ಬಂದಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಯುವಕ ಕೀರ್ತಿ ಮೃತಪಟ್ಟಿದ್ದು, ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳೆಂದು ತಿಳಿದು ಬಂದಿದೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸಮಾಜ ಸೇವಕ ಫಿಶ್ ಮೋನು ಮತ್ತು ಪೊಲೀಸರು ಯುವತಿಯನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯುವಕ ಕೀರ್ತಿ ಹಾಸನ ನಗರದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







