ಕಬ್ಬಿಣ ಕಳವು ಮಾಡುತ್ತಿದ್ದ ಐವರ ಬಂಧನ: ಲಕ್ಷಾಂತರ ರೂ. ಮೌಲ್ಯದ ಮಾಲು ವಶ

ಶಿವಮೊಗ್ಗ, ಡಿ. 28: ನಿರ್ಮಾಣ ಹಂತದ ಮನೆಗಳು ಹಾಗೂ ಹಾರ್ಡ್ ವೇರ್ ಅಂಗಡಿಯೊಂದರಿಂದ ಕಬ್ಬಿಣ ಕಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಹೊರವಲಯ ಸೋಮಿನಕೊಪ್ಪದ ನಿವಾಸಿಗಳಾದ ತೌಫೀಕ್ (21) ಅಮೀರ್ (22) ಅರ್ಷದ್ (21) ಸಲಾನ್ (21) ಹಾಗೂ ಗಾಡಿಕೊಪ್ಪದ ತಾಪಾನಾಯ್ಕ್ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು 3.5 ಲಕ್ಷ ರೂ. ಮೌಲ್ಯದ ಆರೂವರೆ ಟನ್ ತೂಕದಷ್ಟು ಕಬ್ಬಿಣದ ರಾಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ಸ್ ಪೆಕ್ಟರ್ ಹರೀಶ್ ಕೆ. ಪಾಟೀಲ್, ಸಬ್ ಇನ್ಸ್ ಪೆಕ್ಟರ್ ಎನ್.ಎಸ್.ರವಿ ಮತ್ತವರ ಸಿಬ್ಬಂದಿಗಳಾದ ಅಶೋಕ್, ಪ್ರಕಾಶ್, ಶಿವಪ್ಪ, ನಾಗರಾಜ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
5 ಪ್ರಕರಣ ಬೆಳಕಿಗೆ: ಆರೋಪಿಗಳು ಕಳೆದ ಹಲವು ದಿನಗಳಿಂದ ನಗರದ ವಿವಿಧೆಡೆ ನಿರ್ಮಾಣ ಹಂತದ ಮನೆಗಳು ಹಾಗೂ ಕಬ್ಬಿಣದ ಅಂಗಡಿಗಳ ಬಳಿಯಿರುತ್ತಿದ್ದ ಕಬ್ಬಿಣದ ಬಂಡಲ್ ಗಳನ್ನು ರಾತ್ರಿ ವೇಳೆ ಕಳವು ಮಾಡುತ್ತಿದ್ದರು. ಶಕ್ತಿಧಾಮ ಬಡಾವಣೆಯಲ್ಲಿ 2, ಆಟೋ
ಕಾಂಪ್ಲೆಕ್ಸ್, ಪಿ ಅಂಡ್ ಟಿ ಕಾಲೋನಿ ಹಾಗೂ ಕುಂಸಿ ಗ್ರಾಮದಲ್ಲಿ ತಲಾ ಒಂದೊಂದು ಕಬ್ಬಿಣ ಕಳವು ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ವಿನೋಬನಗರ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಲಾ 2 ಹಾಗೂ ಕುಂಸಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ವಿನೋಬನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆ ಠಾಣೆಯ ಪೊಲೀಸರು ತನಿಖೆ ನಡೆಸಿದಾಗ, ಆರೋಪಿಗಳ ಸುಳಿವು ಲಭ್ಯವಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







