ಇಎಸ್‌ಐ ಸೌಲಭ್ಯಕ್ಕೆ ಸ್ಪಂಧಿಸದ ಮಣಿಪಾಲ ಕೆಎಂಸಿ: ಎನ್‌ಜಿಒ ಮಾಸ್ ಇಂಡಿಯಾ ಸಂಸ್ಥೆ ಆರೋಪ

ಉಡುಪಿ, ಡಿ.28: ಇಎಸ್‌ಐನಿಂದ ರೋಗಿಗಳ ಚಿಕಿತ್ಸೆಗೆ ಆದ ವೆಚ್ಚದ ಹಣ ಮರು ಪಾವತಿಯಾಗುವುದಿಲ್ಲ ಎಂದು ಸುಳ್ಳು ಹೇಳುವ ಮಣಿಪಾಲ ಕೆಎಂಸಿ ಆಸ್ಪತ್ರೆ ಬಡ ಕಾರ್ಮಿಕರಿಗೆ ಸಾಕಷ್ಟು ತೊಂದರೆಗಳನನ್ನು ನೀಡುತ್ತಿದೆ ಎಂದು ಮಾಹಿತಿ ಸೇವಾ ಸಮಿತಿ ಆಲ್ ಇಂಡಿಯಾ ಎಂಬ ಎನ್‌ಜಿಒದ ಕರ್ನಾಟಕ ರಾಜ್ಯ ಅಧ್ಯಕ್ಷ ಜಿ.ಎ ಕೋಟೆಯಾರ್ ಆರೋಪಿಸಿದ್ದಾರೆ.
ಶುಕ್ರವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಕಾರ್ಮಿಕರು ಕೆಎಂಸಿಯಲ್ಲಿ ದಾಖಲಾದರೆ ಆರಂಭದಲ್ಲಿ ಚೆನ್ನಾಗಿ ನೋಡಿ ಕೊಂಡು, ಬಳಿಕ ಇಎಸ್‌ಐ ಬಿಲ್ ವಿಳಂಬವಾಗುತಿದ್ದಂತೆ ರೋಗಿಗಳನ್ನು ಖೈದಿಗಳಂತೆ ಕಾಣ ತೊಡಗುತ್ತಾರೆ ಎಂದವರು ತಿಳಿಸಿದರು.
ಇಎಸ್‌ಐ ಬಿಲ್ ವಿಳಂಬವಾಗಲು ಮಣಿಪಾಲ ಕೆಎಂಸಿ ಹೆಲ್ಪ್‌ಡೆಸ್ಕ್‌ನವರೆ ಪ್ರಮುಖ ಕಾರಣರಾಗಿದ್ದಾರೆ. ರೋಗಿಗಳು ಅಗತ್ಯ ದಾಖಲೆಗಳನ್ನು ಬೇಗನೆ ಒದಗಿಸಿದ್ದರೂ ಸಂಬಂಧಪಟ್ಟ ಪ್ರಕ್ರಿಯೆಯನ್ನು ಇವರು ವಿಳಂಬಗೊಳಿಸುತ್ತಾರೆ. ಕಾರ್ಮಿಕರ ಇಎಸ್‌ಐ ಕೆಲಸ ಬೇಗವಾಗಬೇಕೆಂದರೆ ಹೆಲ್ಪ್ ಡೆಸ್ಕ್‌ನವರ ಕೈಕಾಲು ಹಿಡಿಯುವ ಪರಿಸ್ಥಿತಿ ಈಗ ಇದೆ ಎಂದು ಕೋಟೆಯಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಎಸ್‌ಐ ಸೌಲಭ್ಯವುಳ್ಳ ತುರ್ತು ಚಿಕಿತ್ಸೆಯ ಅಗತ್ಯವಿರುವ ಜಿಲ್ಲೆಯ ಬಡ ಕಾರ್ಮಿಕರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆ ಸಮರ್ಪಕ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದವರು ಹೇಳಿದರು.
ಸಮಿತಿ ಸದಸ್ಯರಲ್ಲೊಬ್ಬರಾದ, ಇಎಸ್‌ಐ ಫಲಾನುಭವಿ ಹಾಗೂ ದೂರುದಾರ ಶೇಖರ ಪೂಜಾರಿ ಮಾತನಾಡಿ ನಾನು ಎಂಜಿಯೊಪ್ಲಾಸ್ಟ್ ಸರ್ಜರಿ ಮಾಡಿಸಲು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಆರಂಭದಲ್ಲಿ ಚೆನ್ನಾಗಿ ಚಿಕಿತ್ಸೆ ನೀಡಿ ನೋಡಿ ಕೊಂಡಿದ್ದ ಆಸ್ಪತ್ರೆ, ಇಎಸ್‌ಐ ಬಿಲ್ ವಿಳಂಬವಾದ ಕಾರಣಕ್ಕೆ ನನನ್ನು ಗೋಡಾನ್‌ನಂತ ವಾರ್ಡ್‌ಗೆ ಶಿಫ್ಟ್ ಮಾಡಿದ್ದರು, ಆಸ್ಪತ್ರೆಯಲ್ಲಿ ಖೈದಿಗಳಂತೆ ನನ್ನನ್ನು ನೋಡಿಕೊಂಡರು ಎಂದು ಅಳಲು ತೋಡಿಕೊಂಡರು.
ಕಾರ್ಮಿಕರ ಹಣ ಖಾಸಗಿ ಕಂಪೆನಿಗೆ ಬೇಡ: ಕೇಂದ್ರ ಸರಕಾರ ಇಎಸ್‌ಐ ನ್ನು ಖಾಸಗಿ ವಿಮಾ ಕಂಪೆನಿಗೆ ಕೊಡುವುದಕ್ಕಾಗಿ ಈಗಾಗಲೇ ಶೇ.25ರಷ್ಟು ಉಳಿತಾಯದ ಹಣವನ್ನು ಖಾಸಗಿ ಮ್ಯೂಚುವೆಲ್ ಫಂಡ್‌ಗೆ ಹಾಕಿದೆ. ಯಾವುದೇ ಕಾರಣಕ್ಕೂ ಕಾರ್ಮಿಕರ ವಿಮಾ ಯೋಜನೆ ಹಣವನ್ನು ಖಾಸಗಿ ಮ್ಯೂಚುವೆಲ್ ಫಂಡ್‌ಗೆ ಹಾಕಬಾರದು ಎಂದು ಸಮಿತಿಯ ಮಹಿಳಾ ಅಧ್ಯಕ್ಷೆ ವೀಣಾ ದೀಪಕ್ ಹೇಳಿ, ಈ ಕುರಿತು ಈಗಾಗಲೇ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯಲಾಗಿದೆ ಎಂದರು.
ಕಾರ್ಮಿಕ ವಿಮಾ ಯೋಜನೆಯನ್ನು ಖಾಸಗಿ ವಿಮಾ ಕಂಪೆನಿಗಳಿಗೆ ಕೊಡುವ ಅಧಿಕಾರ ಸರಕಾರಕ್ಕೆ ಇಲ್ಲ. ಇದನ್ನು ಖಂಡಿಸಿ ಆಲ್ ಇಂಡಿಯಾ ಸೇವಾ ಸಮಿತಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ವೀಣಾ ದೀಪಕ್ ನುಡಿದರು.
ಸಮಿತಿ ಯುವ ಘಟಕದ ಅಧ್ಯಕ್ಷ ವಿಶ್ವನಾಥ್, ಸದಸ್ಯರಾದ ರವಿ ಪೂಜಾರಿ, ಗೀತಾ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.