ಡಿ.30: ಮಲ್ಪೆಯಲ್ಲಿ ರಾಜ್ಯಮಟ್ಟದ ಬೃಹತ್ ಮತ್ಸ ಮೇಳ
ಉಡುಪಿ, ಡಿ.28: ಮೀನುಗಾರಿಕೆಗೆ ಹಾಗೂ ಜನರಲ್ಲಿ ಮೀನು ತಿನ್ನುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್, ಮೀನುಗಾರಿಕಾ ಇಲಾಖೆಯ ಸಹಭಾಗಿತ್ವ ದಲ್ಲಿ ಬೃಹತ್ ಮತ್ಸ ಮೇಳ ‘ಫಿಶ್ ಫೆಸ್ಟ್-2018’ಅನ್ನು ಡಿ.30ರಂದು ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಿದೆ ಎಂದು ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುವರ್ಣ, ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ಜೊತೆಗೆ ರಾಜ್ಯದಾದ್ಯಂತ ಮುಂಬ ರುವ ದಿನಗಳಲ್ಲಿ ಫೆಡರೇಷನ್ ವತಿಯಿಂದ ಮತ್ಸ್ಯ ಕ್ಯಾಂಟೀನ್ ಆರಂಭಿಸಿ ತಾಜಾ ಮೀನಿನ ಖಾದ್ಯಗಳನ್ನು ಮತ್ಸ್ಯಪ್ರಿಯರಿಗೆ ಒದಗಿಸುವ ಚಿಂತನೆ ಇದೆ. ಈ ಯೋಜನೆಗೆ ಪೂರ್ವಭಾವಿಯಾಗಿ ಈ ಮತ್ಸ ಮೇಳವನ್ನು ಹಮ್ಮಿಕೊಳ್ಳಲಾ ಗಿದೆ.ಈ ಮೇಳದಲ್ಲಿ ಸುಮಾರು ಒಂದು ಲಕ್ಷ ಮಂದಿ ಮತ್ಸ್ಯಪ್ರಿಯರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಏನೇನಿದೆ? : ಮೇಳದಲ್ಲಿ ಮತ್ಸ್ಯಪ್ರಿಯರಿಗಾಗಿ ತಾಜಾ ಮೀನಿನ ವೈವಿಧ್ಯ ಮಯ ಖಾದ್ಯಗಳ ಮಳಿಗೆ, ಸಾರ್ವಜನಿಕರಿಗಾಗಿ ಈಜು ಸ್ಪರ್ಧೆ ಸಹಿತ ಜಲ ಕ್ರೀಡೆಗಳು, ಸಾಂಪ್ರದಾಯಿಕ ಕೈರಂಪಣಿ ಮೀನುಗಾರಿಕೆ, ಪುರುಷರ ಬೀಚ್ ವಾಲಿಬಾಲ್, ಮಹಿಳೆಯರ ಬೀಚ್ ಥ್ರೋಬಾಲ್, ಪುರುಷ ಹಾಗೂ ಮಹಿಳಾ ತಂಡಗಳ ಬೀಚ್ ಕಬಡ್ಡಿ ಮತ್ತು ಹಗ್ಗಜಗ್ಗಾಟ, ಮರಳು ಶಿಲ್ಪ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಸ್ಪರ್ಧೆಯ ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಶಸ್ತಿಗಳನ್ನು ನೀಡಲಾಗುವುದು. ಶ್ವಾನ ಪ್ರದರ್ಶನ, ಗಾಳಿಪಟ ಪ್ರದರ್ಶನ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9164101390, 9964023344, 8867499501ನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.
ಮೀನುಗಾರರ ಬೇಡಿಕೆ: 60 ವರ್ಷ ಮೇಲ್ಪಟ್ಟ ಮೀನುಗಾರರಿಗೆ ಪಿಂಚಣಿ ಸೌಲಭ್ಯ ನೀಡಬೇಕು, ಶೂನ್ಯ ಬಡ್ಡಿದರದ ಸಾಲ ಯೋಜನೆ ಜಾರಿಗೊಳಿಸಬೇಕು. ಮೀನುಗಾರಿಕಾ ದೋಣಿಗಳ ಸೀಮೆಎಣ್ಣೆ ಪ್ರಮಾಣದ ಹೆಚ್ಚಳ ಮಾಡಬೇಕು. ಮೀನುಗಾರಿಕೆಗೆ ವಿತರಿಸುವ ಡಿಸೇಲ್ ಮೇಲಿನ ರೋಡ್‌ಸೆಸ್ ರದ್ದು ಮಾಡಬೇಕು. ಪ್ರತ್ಯೇಕ ಮೀನುಗಾರಿಕಾ ಕೈಗಾರಿಕಾ ವಲಯ ನಿರ್ಮಿಸಬೇಕು. ಕೃಷಿಗೆ ಒದಗಿಸುವ ಸೌಲಭ್ಯಗಳನ್ನು ಮೀನುಗಾರಿಕೆಗೂ ವಿಸ್ತರಿಸಬೇಕು. ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್ ನಿರ್ದೇಶಕ ಸುರೇಶ್ ಸಾಲಿಯಾನ್, ಯತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಬೋಟ್ ನಾಪತ್ತೆ ಪ್ರಕರಣ; ರಾಜ್ಯ ಸರಕಾರದ ನಿರ್ಲಕ್ಷ್ಯ
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ. ಬೋಟ್ ಪತ್ತೆ ಮಾಡಲು ಯಾವುದೇ ತುರ್ತು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಅದು ವಿಫಲವಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಆರೋಪಿಸಿದರು.
ಕರಾವಳಿ ಕಾವಲು ಪಡೆಯಲ್ಲಿ ಈಜು ಬರುವ ಹಾಗೂ ಪರಿಣತಿ ಹೊಂದಿದ ಸಿಬ್ಬಂದಿಗಳಿಲ್ಲ. ಅಲ್ಲದೆ ಇಂತಹ ತುರ್ತು ಸಂದರ್ಭದಲ್ಲಿ ತುರ್ತು ಕಾರ್ಯಾ ಚರಣೆ ಮಾಡಲು ಬೇಕಾದ ಸೂಕ್ತ ವ್ಯವಸ್ಥೆ ಸಹ ಇಲ್ಲ. ಹೀಗಾಗಿ ಬೋಟ್ ಪತ್ತೆ ಕಾರ್ಯ ವಿಳಂಬವಾಗುತ್ತಿದೆ. ಆಳ ಸಮುದ್ರಕ್ಕೆ ತೆರಳುವ ಬೋಟ್‌ಗಳಲ್ಲಿ 15 ದಿನಗಳಿಗೆ ಬೇಕಾಗುವ ರೇಷನ್ ಇರುತ್ತದೆ. ಆದರೆ ಬೋಟ್ ನಾಪತ್ತೆಯಾಗಿ ಇಂದಿಗೆ 15 ದಿನಗಳು ಕಳೆದಿವೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಬೋಟ್ ಪತ್ತೆ ಮಾಡಲು ಕ್ರಮಕೈಗೊಳ್ಳಬೇಕು ಹಾಗೂ ಮೀನುಗಾರಿಕಾ ಸಚಿವರು ಶೀಘ್ರ ನಾಪತ್ತೆಯಾಗಿರುವ ಮೀನುಗಾರರ ಮನೆಗಳಿಗೆ ಭೇಟಿ ನೀಡಿ, ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.