ರೈಲ್ವೆ ಹುದ್ದೆಗೆ ಎರವಾದ ಅಂಧ ವ್ಯಕ್ತಿಯ ಅರ್ಜಿಗೆ ಉತ್ತರಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶ

ಹೊಸದಿಲ್ಲಿ,ಡಿ.28: ತಾನು ರೈಲ್ವೆಯಲ್ಲಿ ‘ಡಿ’ ದರ್ಜೆಯ ಹುದ್ದೆಗೆ ಆಯ್ಕೆಯಾಗಿದ್ದರೂ ತನ್ನ ದಾಖಲೆಗಳನ್ನು ದೃಢೀಕರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡದ್ದರಿಂದ ಉದ್ಯೋಗಕ್ಕೆ ಸೇರಿಕೊಳ್ಳಲು ತನಗೆ ಸಾಧ್ಯವಾಗಿರಲಿಲ್ಲ,ಹೀಗಾಗಿ ತನ್ನನ್ನು ಆ ಹುದ್ದೆಗೆ ನೇಮಕಗೊಳಿಸಬೇಕು ಎಂದು ಕೋರಿ ಅಂಧವ್ಯಕ್ತಿಯೋರ್ವ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿದೆ.
ಮುಂದಿನ ವಿಚಾರಣಾ ದಿನಾಂಕವಾದ ಜ.10ರಂದು ತನ್ನ ನಿಲುವಿನೊಂದಿಗೆ ಸಿದ್ಧವಾಗಿರುವಂತೆ ಭಾರತೀಯ ರೈಲ್ವೆಗೆ ಸೂಚಿಸಿರುವ ನ್ಯಾಯಾಲಯವು ಅಥವಾ ಅದರ ಮುಖ್ಯ ಸಿಬ್ಬಂದಿ ಅಧಿಕಾರಿ ನ್ಯಾಯಾಲಯಲ್ಲಿ ಖುದ್ದಾಗಿ ಹಾಜರಾಗಬಹುದು ಎಂದು ತಿಳಿಸಿದೆ.
ಇತರ ಹಿಂದುಳಿದ ವರ್ಗಕ್ಕೆ ಸೇರಿರುವ,ಶೇ.100ರಷ್ಟು ಅಂಧತ್ವವನ್ನು ಹೊಂದಿರುವ ರಂಜಿತ್ ಕುಮಾರ ಗುಪ್ತಾ ಅವರ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.
ಗುಪ್ತಾ ‘ಡಿ’ ದರ್ಜೆಯ ಹುದ್ದೆಗೆ ಆಯ್ಕೆಯಾಗಿದ್ದು,2016,ಆ.12ರಂದು ಅವರ ದಾಖಲೆಗಳ ದೃಢೀಕರಣವನ್ನು ನಿಗದಿಗೊಳಿಸಲಾಗಿತ್ತು. ಆದರೆ ಈ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಲಾಗಿರಲಿಲ್ಲ. ಅಲ್ಲದೆ ರೈಲ್ವೆ ನೇಮಕಾತಿ ಘಟಕ(ಆರ್‌ಆರ್‌ಸಿ)ವು ಅದೇ ದಿನ ಅವರ ಕಾಲ್ ಲೆಟರ್‌ನ್ನು ಅಪ್‌ಲೋಡ್ ಮಾಡಿತ್ತು. ಹೀಗಾಗಿ ದೃಢೀಕರಣ ಪ್ರಕ್ರಿಯೆಗಾಗಿ ಸಕಾಲದಲ್ಲಿ ಕೋಲ್ಕತಾ ತಲುಪಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಉದ್ಯೋಗವು ಅವರ ಕೈತಪ್ಪಿತ್ತು. ತನಗೆ ಮತ್ತೊಮ್ಮೆ ಕಾಲ್ ಲೆಟರ್ ಹೊರಡಿಸಬೇಕು ಮತ್ತು ತಾನು ಆಯ್ಕೆಯಾಗಿದ್ದ ಹುದ್ದೆಗೆ ನೇಮಕಗೊಳಿಸಬೇಕು ಎಂದು ಕೋರಿರುವ ಗುಪ್ತಾ,ಪ್ರಕರಣದಲ್ಲಿ ಜಾಗ್ರತ ಇಲಾಖೆಯಿಂದ ವಿಚಾರಣೆಗೂ ಆಗ್ರಹಿಸಿದ್ದಾರೆ.
ರೈಲ್ವೆ ಮಂಡಳಿಯ ಪರೀಕ್ಷಾ ಮಾರ್ಗಸೂಚಿಯಂತೆ ದಾಖಲೆಗಳ ದೃಢೀಕರಣಕ್ಕೆ ಮೊದಲ ಬಾರಿಗೆ ಹಾಜರಾಗಲು ಅಭ್ಯರ್ಥಿಗೆ ಸಾಧ್ಯವಾಗದಿದ್ದರೆ ಆತನಿಗೆ ಇನ್ನೊಂದು ಅವಕಾಶವನನ್ನು ನೀಡಬೇಕು ಎಂಬ ಅಂಶವನ್ನು ಗುಪ್ತಾ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಎರಡನೇ ಅವಕಾಶಕ್ಕಾಗಿ ತನ್ನ ಕೋರಿಕೆಯನ್ನು ಆರ್‌ಆರ್‌ಸಿ ತಿರಸ್ಕರಿಸಿತ್ತು ಮತ್ತು ತಾನು ಅಂಗವಿಕಲ ವ್ಯಕ್ತಿಗಳ ಯೋಗಕ್ಷೇಮ ಪ್ರಾಧಿಕಾರದ ಮುಖ್ಯ ಆಯುಕ್ತರಿಗೂ ದೂರು ಸಲ್ಲಿಸಿದ್ದೆ, ಆದರೆ ಕೆಲವು ಕಾಲ ವಿಚಾರಣೆ ನಡೆಸಿದ ಅವರು ಯಾವುದೇ ಕಾರಣವನ್ನು ನೀಡದೇ ಅದನ್ನು ವಿಲೇವಾರಿಗೊಳಿಸಿದ್ದರು ಎಂದೂ ಗುಪ್ತಾ ತಿಳಿಸಿದ್ದಾರೆ.







