ಪ್ರೊ. ಹಿಲ್ಡಾ ರಾಯಪ್ಪನ್‌ಗೆ ‘ಕರಾವಳಿ’ ಗೌರವ ಪ್ರಶಸ್ತಿ

ಮಂಗಳೂರು, ಡಿ.28: ಕರಾವಳಿ ಉತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದಿರುವ ಓರ್ವ ಸಾಧಕರಿಗೆ ಕರಾವಳಿ ಗೌರವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದರಂತೆ ಈ ಬಾರಿ ಕರಾವಳಿ ಗೌರವ ಪ್ರಶಸ್ತಿಗೆ ಪ್ರೊ.ಹಿಲ್ಡಾ ರಾಯಪ್ಪನ್ ಅವರನ್ನು ಸಮಿತಿಯು ಆಯ್ಕೆ ಮಾಡಿದೆ.
ಡಿ.30ರಂದು ಸಂಜೆ 5:30ಕ್ಕೆ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರೊ. ಹೀಲ್ಡಾ ರಾಯಪ್ಪನ್ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಸಮಾಜದ ಬಡತನ, ನೋವು, ವೇದನೆಗಳ ಒಳ ಆಯಾಮಗಳನ್ನು ಕಂಡ ಪ್ರೊ. ಹಿಲ್ಡಾ ರಾಯಪ್ಪನ್ ಸಮಾಜಸೇವೆಯ ಮೂಲಕ ತನ್ನೊಳಗಿನ ಅಂತರಂಗದ ಒಡಲನ್ನು ಕಡಲನ್ನಾಗಿ ಹರಿಯ ಬಿಟ್ಟಿದ್ದರು. ಅದರ ಪರಿಣಾಮವಾಗಿ 1987ರಲ್ಲಿ ಕೌನ್ಸಿಲಿಂಗ್ ಸೇವಾ ಕಾರ್ಯಕ್ಕೆ ಸಾಂಸ್ಥಿಕ ರೂಪು ನೀಡಿ ಪ್ರಜ್ಞಾ ಸಲಹಾ ಕೇಂದ್ರ ಸ್ಥಾಪಿಸಿದ್ದರು. ಇದು ಮಂಗಳೂರಿನ ಪ್ರಪ್ರಥಮ ಕೌಟುಂಬಿಕ ಸಲಹಾ ಕೇಂದ್ರವಾಗಿಯೂ ಗುರುತಿಸಲ್ಪಟ್ಟಿವೆ.
ಎಲ್ಲಾ ವರ್ಗದ ಜನರ ಕೌಟುಂಬಿಕ, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡಿ, ಮುದುಡಿದ ಮನಸ್ಸುಗಳನ್ನು ಅರಳಿಸಲು, ಒಡೆದ ಮನಸ್ಸುಗಳನ್ನು ಬೆಸೆಯಲು ಆಪ್ತ ಸಮಾಲೋಚನೆಯನ್ನು ಪರಿಹಾರ ತಂತ್ರವಾಗಿ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದು ಕಾರ್ಯಸಾಧಿಸಿರುವ ಕೀರ್ತಿ ಹಿಲ್ಡಾ ರಾಯಪ್ಪನ್‌ಗೆ ಸಲ್ಲುತ್ತದೆ.
ಮಕ್ಕಳಿಗಾಗಿ ನಿರ್ಗತಿಕ ಮಕ್ಕಳ ಕುಟೀರ, ಬಾಲ ಕಾರ್ಮಿಕ ಮಕ್ಕಳ ರಕ್ಷಣೆ ಮತ್ತು ಶಿಕ್ಷಣ, ಚಿಣ್ಣರ ತಂಗುದಾಣ, ಮಕ್ಕಳ ನಿಧಿ ಮುಂತಾದ ಚಟುವಟಿಕೆಗಳಿಂದ ನೊಂದ ಮಕ್ಕಳಿಗೆ ಆಶ್ರಯ ನೀಡಿರುವ ಹಿಲ್ಡಾ ರಾಯಪ್ಪನ್ ಮಹಿಳೆಯರನ್ನು ಕೇಂದ್ರೀಕರಿಸಿ ಅಲ್ಪಾವಧಿ ವಸತಿ ಗೃಹ, ಸ್ವಾಧಾರ ಗೃಹ, ಸಾಂತ್ವನ ಮಹಿಳಾ ಸಹಾಯವಾಣಿ, ಮಹಿಳಾ ಸ್ವಸಹಾಯ ಗುಂಪುಗಳು ಮೊದಲಾದವುಗಳನ್ನು ಸ್ಥಾಪಿಸಿ ಶೋಷಿತ ಮಹಿಳೆಯರ ಬದುಕಿಗೆ ಆಸರೆಯಾಗಿರುತ್ತಾರೆ.
ಪುರುಷರನ್ನು ಕೇಂಧ್ರೀಕರಿಸಿ ಅಮಲು ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ ಸ್ಥಾಪಿಸುವ ಮೂಲಕ ಪ್ರಜ್ಞಾ ಸಲಹಾ ಕೇಂದ್ರವು ಅನೇಕ ಕುಟುಂಬಗಳ ಬದುಕಿಗೆ ಬೆಳಕು ನೀಡುತ್ತಾ ಸಮಾಜಕ್ಕೊಂದು ಮಾದರಿ ಸಂಸ್ಥೆಯಾಗಿ ಬೆಳೆದುಬಂದಿವೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 125ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂಬ ಪುರಸ್ಕಾರ (1996), ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜ ಸೇವೆಗಾಗಿ ಗೌರವ (1997), ಟ್ರೈನಿಂಗ್ ಸೆಂಟರ್‌ನಿಂದ ಸಮಾಜ ಸೇವೆಗಾಗಿ ಗೌರವ (1998), ಸೈಂಟ್ ಆಗ್ನೇಸ್ ಮಹಿಳಾ ಕಾಲೇಜಿನಲ್ಲಿ ಮಹಿಳೆಯರ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಸನ್ಮಾನ (2000), ರೋಟರಿ ಕ್ಲಬ್ ಮಂಗಳೂರು ಇವರಿಂದ ಸಮಾಜಕ್ಕೆ ಅಮೂಲ್ಯ ಸೇವೆ ನೀಡಿದ್ದಕ್ಕಾಗಿ ಗೌರವ (2002), ರೋಶನಿ ನಿಲಯ ಹಳೆ ವಿದ್ಯಾರ್ಥಿ ಸಂಘದಿಂದ ಸಮಾಜ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ ಗೌರವ (2007), ರಚನಾ ಫೌಂಡೇಶನ್ ಸಂಸ್ಥೆಯ ವತಿಯಿಂದ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರಶಸ್ತಿ (2012), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಗೌರವ ಪುರಸ್ಕಾರಗಳು ಪ್ರೊ. ಹಿಲ್ಡಾ ರಾಯಪ್ಪನ್ ಅವರನ್ನು ಅರಸಿಕೊಂಡು ಬಂದಿವೆ.







